ಮಡಿಕೇರಿ, ಏ.15 NEWS DESK : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ಅಲ್ಲದೇ ಸಂವಿಧಾನವನ್ನು ರಚನೆ ಮಾಡುವಲ್ಲಿ ಅವರ ಪಾತ್ರ ಅವಿಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಅರಿತು ಅವುಗಳನ್ನು ಪಾಲಿಸೋಣ. ಡಾ.ಬಿ.ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯುವ ಮೂಲಕ ಯುವಕರು ಉತ್ತಮ ಜೀವನ ರೂಪಿಸಿಕೊಳ್ಳಲು ಕರೆ ನೀಡಿದರು.
ಸಂವಿಧಾನ ನಮಗೆ ಉತ್ತಮ ಪ್ರಜಾಪ್ರಭುತ್ವ ರಚಿಸಲು ಮತದಾನ ಹಕ್ಕು ನೀಡಿದೆ. ಅದನ್ನು ಅರ್ಹರಿಗೆ ನೀಡಿ, ಅಂಬೇಡ್ಕರ್ ಅವರ ಆಶಯ ದಂತೆ ಮುಂದೆ ಸಾಗೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ ಮಾತನಾಡಿ, ಸರ್ವ ಜನಾಂಗದ ಅಭಿವೃದ್ಧಿಗಾಗಿ ಹಗಲಿರುಳು ನಿರಂತರ ಕೆಲಸ ಮಾಡಿದವರು ಡಾ. ಅಂಬೇಡ್ಕರ್ ಎಂದರು. ಭಾರತ ರತ್ನ ಡಾ. ಅಂಬೇಡ್ಕರ ಅಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತ ದೇಶದ ಅಭಿವೃದ್ಧಿ ಸಂಕೇತವೇ ಸಂವಿಧಾನವಾಗಿದೆ. ಇದರಲ್ಲಿ ಎಲ್ಲವು ಅಡಗಿದೆ ಎಂದ ಅವರು, ಇದೇ ಏ.26 ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಎಲ್ಲರೂ ತಪ್ಪದೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಕೋರಿದರು.
ಉಪವಿಭಾಗಾಧಿಕಾರಿ ವಿನಾಯಕ ನಾರ್ವೇ ಅವರು ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಬಾಲ್ಯದ ಜೀವನದಲ್ಲಿ ಶಿಕ್ಷಣ ಪಡೆಯಲು ಅತೀವ ಕಷ್ಟ ಪಟ್ಟಿದ್ದಾರೆ. ಅವರು ೬೪ ಪದವಿ ಪಡೆದಿದ್ದಾರೆ ಎಂದರು. ಅವರ ಜನ್ಮ ದಿನಾಚರಣೆ ಇಂದು ಆಚರಿಸಿ ಮರೆಯಬಾರದು. ನಿರಂತರವಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು.
ನ್ಯಾಯವಾದಿ ರಾಜಶೇಖರ ಮಾತನಾಡಿ, 14ನೇ ಮಗನಾಗಿ ಏ.14 ರಂದು ಜನಿಸಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದು ಎಂದು ದೇಶಕ್ಕೆ ತೋರಿಸಿಕೊಟ್ಟರು. ದೇಶದ ಪ್ರಥಮ ಕಾನೂನು ಸಚಿವರಾಗಿ ಕಾರ್ಯ ಮಾಡಿ, ಅಸಮಾನತೆ ಯಿಂದ ಸಮಾನತೆಯೆಡೆ ಸಮಾಜವನ್ನು ಸಾಗಿಸಲು ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಅಪರ ಜಿಲ್ಲಾಧಿಕಾರಿ ವೀಣಾ, ತಹಶಿಲ್ದಾರರ ರಮೇಶಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಇದೇ ವೇಳೆ ಪ್ರಭಂದ ಹಾಗೂ ಚಿತ್ರಕಲಾ ಸ್ಪರ್ದೇಯಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.







