ಮಡಿಕೇರಿ, ಏ.15 NEWS DESK : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ನವ ಭಾರತದ ನಿರ್ಮಾತೃ. ಅವರ ಚಿಂತನೆಗಳು ಆಧುನಿಕ ಭಾರತವನ್ನು ರೂಪಿಸಿದೆ ಎಂದು ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ ಅವರು ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಜರುಗಿದ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 133ನೇ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಚಿಂತನೆಗಳು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಅರ್ಥಿಕ ವಲಯಗಳ ಸಮಷ್ಟಿ ಕ್ರಾಂತಿಗೆ ಕಾರಣವಾಗಿದೆ. ಅವರಂತೆ ಶಿಕ್ಷಣವನ್ನು ಹುಲಿಯ ಹಾಲಿನ ಮೇವಾಗಿಸಿಕೊಂಡು ಘನತೆಯ ಬದುಕನ್ನು ಕಟ್ಟಿಕೊಳ್ಳುವ ಕಡೆಗೆ ನಾವೆಲ್ಲರೂ ಮುನ್ನೆಡೆಯ ಬೇಕಾಗಿದೆ ಎಂದರು.
ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆದ್ದರಿಂದ ಯುವಜನತೆ ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ ಹೆಚ್ಚಿನ ಉತ್ಸುಕತೆ ತೋರಬೇಕಾಗಿದೆ ಎಂದು ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ ಮಾತನಾಡಿ, ಸಮಾನತೆಯ, ಸಾಮಾಜಿಕ ನ್ಯಾಯದ ಬದುಕಿಗೆ ಅಂಬೇಡ್ಕರ್ ಅವರು ಆದರ್ಶಪ್ರಾಯರು. ಗೌರವಯುತ ಬದುಕಿಗೆ ಅಂಬೇಡ್ಕರ್ ಅವರು, ಅವರ ಚಿಂತನೆಗಳೇ ನಮಗೆ ಮಾದರಿ ಎಂದರು.
ಸ್ನಾತಕೋತ್ತರ ಕೊಡವ ಭಾಷಾ ವಿಭಾಗದ ಸಂಯೋಜಕರು ಹಾಗೂ ಕಾಲೇಜಿನ ಗಣಕವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ರವಿಶಂಕರ್ ಮಾತನಾಡಿ ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕ ಎಂದರು. ಸಂವಿಧಾನದ ಪ್ರಾಮುಖ್ಯತೆ ಮಹತ್ವದ ಕುರಿತು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಜ್ಞಾನಿಗಳು ಆದ ಡಾ. ಜೆ.ಜಿ ಮಂಜುನಾಥ್ ತಿಳಿಸಿಕೊಟ್ಟರು.
ದ್ವಿತೀಯ ಬಿಸಿಎ ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಹೆಚ್.ಡಿ. ಮುಖೇಶ್ ಕಾರ್ಯಕ್ರಮ ನಿರ್ವಹಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಆರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ರೇಣು ಶ್ರೀ ವಂದಿಸಿದರು.







