
ಮಡಿಕೇರಿ ಏ.15 NEWS DESK : ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಅವರು ಈ ಬಾರಿ ಗೆಲುವು ಸಾಧಿಸುವುದು ನಿಶ್ಚಿತವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಮುಗಿದ ನಂತರ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಇಡೀ ಕಾಂಗ್ರೆಸ್ ಬಳಗ ಮಂಜುನಾಥ್ ಕುಮಾರ್ ಅವರ ಗೆಲುವಿಗಾಗಿ ಶ್ರಮಿಸಲಿದೆ ಎಂದರು.
ಶಿಕ್ಷಕರ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಯನ್ನು ಎದುರಿಸಿದ್ದ ಮಂಜುನಾಥ್ ಕುಮಾರ್ ಅವರು ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ 15 ಮಂದಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಕೊಡಗು ಜಿಲ್ಲೆಯಲ್ಲಿ 1500 ಮತದಾರರಿದ್ದಾರೆ, ಇಬ್ಬರು ಶಾಸಕರು ಕಾಂಗ್ರೆಸ್ಸಿನವರೇ ಆಗಿರುವುದರಿಂದ ಗೆಲುವು ಮಂಜುನಾಥ್ ಕುಮಾರ್ ಅವರ ಸಮೀಪದಲ್ಲೇ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕ ವರ್ಗಕ್ಕೆ ಅತ್ಯಂತ ಆತ್ಮೀಯರಾಗಿ, ಶಿಕ್ಷಣ ಕ್ಷೇತ್ರದ ಎಲ್ಲಾ ಆಗುಹೋಗುಗಳನ್ನು ಬಲ್ಲವರಾಗಿ ಮತ್ತು ಅನುಭವಿ ರಾಜಕಾರಣಿಯೂ ಆಗಿರುವ ಮಂಜುನಾಥ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷ ಬೆನ್ನೆಲುಬಾಗಿ ನಿಂತಿದೆ. ಮತದಾರರು ಖಚಿತವಾಗಿ ಇವರನ್ನು ಆಯ್ಕೆ ಮಾಡುತ್ತಾರೆ ಎಂದು ರಮೇಶ್ ತಿಳಿಸಿದರು.
ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ನಾನು ಗೆದ್ದು ಬಂದರೆ ಎಲ್ಲಾ ಶಿಕ್ಷಕ ವೃಂದಕ್ಕೆ ಉಚಿತ ವಿಮಾ ಸೌಲಭ್ಯ ಜಾರಿ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಹಳೆಯ ಪಿಂಚಣಿ ಯೋಜನೆಯನ್ನು 2006 ಏ.1 ರಂದು ಅಂದಿನ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರದ್ದು ಮಾಡಿತು. 2006 ಮಾ.31ಕ್ಕಿಂತ ಮೊದಲು ನೇಮಕಾತಿಯಾದ ಖಾಸಗಿ ಅನುದಾನಿತ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆ ಈಗಲೂ ಅನ್ವಯವಾಗುತ್ತಿದೆ. ಆದರೆ 2006 ಏ.1 ರ ನಂತರ ಅನುಮೋದನೆ ಪಡೆದವರಿಗೆ ಹಳೆಯ ಪಿಂಚಣಿ ಯೋಜನೆ ರದ್ದಾಗಿದ್ದು, ಹೊಸ ಪಿಂಚಣಿ ಯೋಜನೆ ಕೂಡ ಅನ್ವಯವಾಗದೇ ಇರುವುದು ಶಿಕ್ಷಕ ವೃಂದಕ್ಕೆ ಮಾಡಿದ ಅನ್ಯಾಯವಾಗಿದೆ. ಪಿಂಚಣಿ ನೀಡದಿದ್ದರೆ ನಿವೃತ್ತಿಯಾದ ನಂತರ ಶಿಕ್ಷಕರು ಬೀದಿ ಪಾಲಾಗುತ್ತಾರೆ. ಆದ್ದರಿಂದ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳಿದರು.
ಕೇಂದ್ರದ ತಪ್ಪು ನಿರ್ಧಾರಗಳಿಂದ ಇಡೀ ಶಿಕ್ಷಣ ವ್ಯವಸ್ಥೆ ಕಲುಷಿತಗೊಂಡಿದೆ. ಅಗತ್ಯ ಸೇವಾ ಭದ್ರತೆ ಮತ್ತು ವೇತನ ಸೌಲಭ್ಯಗಳಿಂದ ಶಿಕ್ಷಕರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಅತಿ ವೇಗವಾಗಿ ಶೈಕ್ಷಣಿಕ ವಿಕಸನವಾಗುತ್ತಿದ್ದು, ಇದಕ್ಕೆ ಪೂರಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ಅಲ್ಲದೆ ಶಿಕ್ಷಕ ವೃಂದದ ಹಿತ ಕಾಯುವ ಕೆಲಸ ಆಗಬೇಕಾಗಿದೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಕಾಳಜಿ ತೋರಿಲ್ಲವೆಂದು ಮಂಜುನಾಥ್ ಕುಮಾರ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್, ಉಪಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಹಾಗೂ ಪ್ರಮುಖರಾದ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.








