ವಿರಾಜಪೇಟೆ ಏ.15 NEWS DESK : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಎನ್.ಎಸ್.ಎಸ್., ಐಕ್ಯೂಎಸಿ, ವಿದ್ಯಾರ್ಥಿ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಸಮಾನತೆಯ ತತ್ವವನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಿಷಯದಂತೆ ವಿಶ್ವದಲ್ಲಿಯೇ ಬಲಿಷ್ಠ ಸಂವಿಧಾನವನ್ನು ರಚಿಸಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಸಂವಿಧಾನದ ಆಶಯಗಳನ್ನು ವಿವರಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಅವರು ವಿಶ್ವದಲ್ಲಿಯೇ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಮತ್ತು ಸಂವಿಧಾನದ ರಚನೆಯಲ್ಲಿ, ಆರ್.ಬಿ.ಐ ಸ್ಥಾಪನೆಯಲ್ಲಿ, ಅರ್ಥಶಾಸ್ತ್ರಕ್ಕೆ ಅಂಬೇಡ್ಕರ್ ಅವರ ಕೊಡುಗೆಗಳನ್ನು ಉದಾಹರಣೆ ಸಮೇತ ವಿವರಿಸಿದರು.
ಕಾಲೇಜಿನ ಎನ್.ಎಸ್.ಎಸ್. ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾಲೇಜಿನ ವಿದ್ಯಾರ್ಥಿ ಘಟಕದ ಸಂಚಾಲಕಿ ದೃಶ್ಯ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.







