
ಮಡಿಕೇರಿ ಏ.15 NEWS DESK : ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಖಂಡನೀಯ. ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಸ್ವಾಭಿಮಾನಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರ ಹೇಳಿಕೆ ಅವರು ಮಹಿಳೆಯರ ಮೇಲೆ ಹೊಂದಿರುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದರಿಂದ ರಾಷ್ಟ್ರದ ಇಡೀ ಮಹಿಳೆಯರನ್ನು ಅವಮಾನಿಸಿದಂತ್ತಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತದೆ, ಇಡೀ ಸಮಾಜ ಮಹಿಳೆಯರನ್ನು ಕಾವೇರಿ, ಚಾಮುಂಡೇಶ್ವರಿ, ಭೂತಾಯಿ ಎಂದು ಕೈಮುಗಿಯುತ್ತದೆ. ಆದರೆ ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರಿಗೆ ಇರುವ ಭಾವನೆಯನ್ನು ಯಾವ ಸ್ವಾಭಿಮಾನಿ ಮಹಿಳೆ ಕೂಡ ಸಹಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ಇಂದು ಅವರ ವಿರುದ್ಧ ದಿಕ್ಕಾರ ಕೂಗುವ ಪರಿಸ್ಥಿತಿ ಉದ್ಭವಿಸಿದೆ. ಕುಮಾರಸ್ವಾಮಿ ಅವರಿಂದ ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳಿಗೆ ದೊಡ್ಡ ಮಟ್ಟದ ಅವಮಾನವಾಗಿದೆ. ಯಾವ ಮಹಿಳೆ ಕೂಡ ಇವರಿಗೆ ಮತ್ತು ಇವರು ಮೈತ್ರಿ ಮಾಡಿಕೊಂಡಿರುವ ಎನ್‍ಡಿಎ ಕೂಟಕ್ಕೆ ಮತ ನೀಡುವುದಿಲ್ಲ ಎಂದರು.
ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಿತ್ರ ಪಕ್ಷ ಬಿಜೆಪಿ ಧ್ವನಿ ಎತ್ತದೆ ಇರುವುದು ಖಂಡನೀಯ. ಜಾತಿವಾದದ ಪಕ್ಷದೊಂದಿಗೆ ಕೈಜೋಡಿಸಿರುವ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿಯ ಮೌನ ಮಹಿಳೆಯರ ಮೇಲೆ ಆ ಪಕ್ಷಕ್ಕೂ ಗೌರವವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ವೀಣಾ ಅಚ್ಚಯ್ಯ ಆರೋಪಿಸಿದರು.
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದ್ದು, ಮಹಿಳೆಯರು ಮುಖ್ಯವಾಹಿನಿಗೆ ಬಂದು ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರತಿಯೊಂದು ವರ್ಗದ ಜನ ಸರಕಾರದ ಗ್ಯಾರಂಟಿ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸಹಿಸದ ಕುಮಾರಸ್ವಾಮಿ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಬಡವರ ಏಳಿಗೆ ಅವರಿಗೆ ಬೇಕಾಗಿಲ್ಲ ಎಂದು ಟೀಕಿಸಿದರು.
::: ಕೊಡಗಿನಲ್ಲಿ ಮಂತರ್, ಪೊನ್ನಣ್ಣ ಹವಾ :::
ಕೊಡಗು ಜಿಲ್ಲೆಯಲ್ಲಿ ಯಾವುದೇ ರೀತಿಯ ಮೋದಿ ಹವಾ ಕಾಣುತ್ತಿಲ್ಲ, ಇಲ್ಲಿ ಇರುವುದು ಕೇವಲ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರ ಹವಾ. ಅಭಿವೃದ್ಧಿ ಕಾರ್ಯಗಳ ಮೂಲಕವೇ ಇವರಿಬ್ಬರು ಜಿಲ್ಲೆಯ ಜನರ ಮುತ್ತುರತ್ನಗಳಾಗಿದ್ದಾರೆ. ಇವರುಗಳ ಮೇಲಿನ ಗೌರವದಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರನ್ನು ಅತ್ಯಧಿಕ ಮತಗಳಿಂದ ಮತದಾರರು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ಏ.17 ರಂದು ಪ್ರತಿಭಟನೆ :::
ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಏ.17 ರಂದು ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ವೀಣಾ ಅಚ್ಚಯ್ಯ ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯ ವಿರುದ್ಧ ಇಡೀ ಮಹಿಳಾ ಸಮುದಾಯ ದಿಕ್ಕಾರ ಕೂಗುತ್ತಿದೆ, ಒಬ್ಬ ಮಾಜಿ ಮುಖ್ಯಮಂತ್ರಿಯಿಂದ ಈ ರೀತಿಯ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಯಾವ ಮಹಿಳೆಯೂ ಇವರಿಗೆ ಮತ ನೀಡಬಾರದು. ಮಹಿಳೆಯರು ಎಲ್ಲೂ ದಾರಿ ತಪ್ಪುತ್ತಿಲ್ಲ, ಕುಮಾರಸ್ವಾಮಿ ಅವರೇ ದಾರಿ ತಪ್ಪಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರಿಗೆ ಮಾಸಿಕ ರೂ.2 ಸಾವಿರ ಮತ್ತು ಉಚಿತ ಬಸ್ ಪ್ರಯಾಣದ ಸೌಲಭ್ಯ ವಿಶ್ವದ ಎಲ್ಲೂ ನೀಡುತ್ತಿಲ್ಲ. ಸರಕಾರದ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ. ಇದನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಕುಮಾರಸ್ವಾಮಿ ಅವರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಶೈಲಾ ಕುಟ್ಟಪ್ಪ, ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಹಾಗೂ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಉಪಸ್ಥಿತರಿದ್ದರು.








