
ಸೋಮವಾರಪೇಟೆ ಏ.15 NEWS DESK : ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ವಾಸ್ತುಶಿಲ್ಪಿ, ದಲಿತ ಚಳುವಳಿಯ ಪಿತಾಮಹಾ ಎಂದು ಪರಿಗಣಿಸಲಾಗಿದೆ. ಅವರು ಸಂವಿಧಾನದ ಹಕ್ಕುಗಳಿಂದ ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕ ಶಿರಂಗಾಲ ಲೋಕೇಶ್ ಅಭಿಪ್ರಾಯಿಸಿದರು.
ತಾಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಮಾನವ ಧರ್ಮದ ಪ್ರತಿಪಾದಕ, ಸಮಾಜ ಸುಧಾರಕ, ಸಂವಿಧಾನ ತಜ್ಞ, ಮಾನವ ಹಕ್ಕುಗಳ ಹೋರಾಟಗಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಅವರು ಭಾರತದಲ್ಲಿಯ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯರು, ಎದುರಿಸುತ್ತಿದ್ದ ತಾರತಮ್ಯ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟ ಮಾಡಿ, ನ್ಯಾಯ ಒದಗಿಸಿಕೊಟ್ಟ ಮಹಾನ್ ಚೇತನ ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮಹಿಳೆಯರು, ಕಾರ್ಮಿಕರು, ಅಸ್ಪೃಶ್ಯರು, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಪಾಡಲು ಶ್ರಮಿಸಿದ್ದಾರೆ. ಇವತ್ತು ನಾವೆಲ್ಲಾ ಪಡೆಯುತ್ತಿರುವ ಸೌಲಭ್ಯಗಳು ಅಂಬೇಡ್ಕರ್ ಅವರ ಕೊಡುಗೆಯಾಗಿದೆ ಎಂದು ಹೇಳಿದರು.
ಬೆಳಿಗ್ಗೆ ಪಟ್ಟಣದ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ತಹಸೀಲ್ದಾರ್ ನವೀನ್ ಕುಮಾರ್ ಮಾಲಾರ್ಪಣೆ ಮಾಡಿ, ನಂತರ ಸಭಾಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಲ್ಪಿಸಿರುವ ಪ್ರಮುಖವಾಗಿ ಸಹೋದರತ್ವ, ವಿವಿಧತೆಯಲ್ಲಿ ಏಕತೆ, ಸಮಾನತೆ ಈ ಮೂರು ತತ್ವಗಳನ್ನು ಮುಖ್ಯವಾಗಿ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಸಿದ್ದೇಗೌಡ, ಬಿಇಒ ಭಾಗ್ಯಮ್ಮ, ಎಒ ಭವಾನಿ ಶಂಕರ್, ಲೋಕ್ಯಾನಾಯಕ್, ರಜಿನಿಕಾಂತ್ ಮತ್ತಿತರರು ಹಾಜರಿದ್ದರು.








