ವಿರಾಜಪೇಟೆ ಏ.17 NEWS DESK : ಬೈತೂರಪ್ಪ ಸಹೋದರರ ತಂಗಿಯಾದ ಅರಮೇರಿ ಗ್ರಾಮ ಬೆಪ್ಪುನಾಡ್ ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮೂಕೇರಿರ ಕುಟುಂಬದ ಸದಸ್ಯರಿಂದ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಎಳೆನೀರಿನಿಂದ ಶುದ್ಧಗೊಳಿಸಿ ಪೂಜೆ ಸಲ್ಲಿಸಲಾಯಿತು. ಮುಂಜಾನೆ ಬಾಚೀರ ಮನೆಯಿಂದ ಭಂಡಾರ ದೇಗುಲಕ್ಕೆ ತರಲಾಯಿತು. ದೇವರ ದರ್ಶನದ ಬಳಿಕ ವಿಶೇಷ ಪೊಜೆ ನಡೆಯಿತು.
ಮರು ದಿನ ಬೆಳಿಗ್ಗೆ ದೇವರ ದರ್ಶನ, ದೇವಿ ನೆಲೆನಿಂತ ಕೊಡೆ ತರರುವುದು. ಚೆರಿಯಕಂಡ ಕುಟುಂಬದ ಸ್ಥಳದಿಂದ ವಿವಿಧ ಗದ್ದೆಗಳ ಮಾರ್ಗದಿಂದ ಜನಾಂಗ ಬಾಂದವರು ಕೊಡೆಯನ್ನು ಹೊತ್ತು ದೇಗುಲ ಪ್ರವೇಶ ಮಾಡಿದರು. ಕೊಡೆ ದೇಗುಲ ಪ್ರವೇಶ ಮಾಡಿದಂತೆ ವಿವಿಧ ದೇವರುಗಳ ದೈವ ನರ್ತಕರು ಕೊಡೆಯನ್ನು ಬರಮಾಡಿಕೊಂಡರು. ನಂತರ ದೇಗುಲಕ್ಕೆ ಪ್ರದಕ್ಷಿಣೆ ಸಲ್ಲಿಸಿ, ಕೊಡೆಯನ್ನು ಉತ್ಸವ ಮೂರ್ತಿ ಬಳಿ ಇಡಲಾಯಿತು.
ಎತ್ತು ಪೋರಾಟ್, ದುಡಿಕೊಟ್ಟ್ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕುಂಞ ತೊಟ್ಟ್ ಹರಿಕೆ, ಬಾರಾಣಿ ಸಲ್ಲಿಸಲಾಯಿತು. ಸಂಜೆ ನಾಲ್ಕರ ಸಮಯದಲ್ಲಿ ಕುರುಂದ ಕಳಿ ದರ್ಶನ ನಡೆಯಿತು.
ದರ್ಶನ ನರ್ತಕರ ನಿರ್ದೇಶನದಂತೆ ದೇಗುಲ ಆವರಣದಲ್ಲಿರುವ ಮರದ ಉತ್ತರದಲ್ಲಿ ತೆಂಗಿನಕಾಯಿ ಕಟ್ಟಿ ಕೊವಿಯಿಂದ ಗುಂಡು ಹೊಡೆಯಲಾಯಿತು. ಸಂಜೆ ಶ್ರೀ ಪನ್ನಂಗಾಲತಮ್ಮೆ ದೇವಿಯ ಉತ್ಸವ ಮೂರ್ತಿ ದೇಗುಲ ಪ್ರದಕ್ಷೀಣೆಯೊಂದಿಗೆ ಉತ್ಸವ ತೆರೆ ಕಂಡಿತು.
ತಕ್ಕ ಮುಖ್ಯಸ್ಥರು, ಊರು ತಕ್ಕರು, ಶ್ರೀ ಪನ್ನಂಗಾಲತಮ್ಮೆ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಜನಾಂಗ ಬಾಂಧವರು, ವಿವಿಧ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ







