
ಮಡಿಕೇರಿ ಏ.19 NEWS DESK : ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದ ಅಭ್ಯುದಯಕ್ಕೆ ಪೂರಕವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆನ್ನುವುದು ಎಲ್ಲರ ಅಭಿಲಾಷೆ ಎಂದು ಬಿಜೆಪಿ ಸೈನಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಮೇಜರ್ ಓಡಿಯಂಡ ಎಸ್.ಚಿಂಗಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಮಾಜಿ ಸೈನಿಕರು, ವಿಧವೆಯರು ಹಾಗೂ ಸೈನಿಕರ ಅವಲಂಬಿತರು ವಾಸವಿದ್ದಾರೆ. ಹಲವು ಅವಕಾಶಗಳಿಂದ ವಂಚಿತರಾಗಿದ್ದ ಇವರಿಗೆ ಕೇಂದ್ರ ಸರಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೊಡಗಿನಲ್ಲಿ ಕಳೆದ 8 ವರ್ಷಗಳಿಂದ ಬಿಜೆಪಿ ಸೈನಿಕ ಪ್ರಕೋಷ್ಠ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುಮಾರು 500 ಸೈನಿಕರ, ಮಾಜಿ ಸೈನಿಕರ ಮನೆ ಮನೆಗೆ ಭೇಟಿ ನೀಡಿರುವ ಪ್ರಕೋಷ್ಠ, 100ಕ್ಕೂ ಹೆಚ್ಚು ಸಭೆ ನಡೆಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹತ್ತು ಹಲವು ಯೋಜನೆಯ ಬಗ್ಗೆ ತಿಳುವಳಿಕೆ ನೀಡಿದೆ. ಒಂದು ಶ್ರೇಣಿ ಒಂದು ಹುದ್ದೆ, ಮಹಿಳೆಯರಿಗೆ ಸೇನೆಯಲ್ಲಿ ಭರ್ತಿ, ಮಾಜಿ ಸೈನಿಕರ ಮತ್ತು ವಿಧವೆಯರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಅನುದಾನ, ಮಾಜಿ ಸೈನಿಕರಿಗೆ ಭೂ ಮಂಜೂರಾತಿ, ಅಗ್ನಿವೀರ್ ಮತ್ತು ಅಗ್ನಿಪಥ್‍ಗೆ ಆಯ್ಕೆ, ಕಳೆದ 10 ವರ್ಷದಿಂದ ಕೇಂದ್ರ ಸರ್ಕಾರದಿಂದ ಸೈನಿಕರಿಗೆ ಒದಗಿಸುತ್ತಿರುವ ಸೌಲಭ್ಯ, ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದ ನಂತರ ಅಲ್ಲಿಯ ಸ್ಥಿತಿಗತಿ, ಇತರ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ದೇಶದ ಅಭಿವೃದ್ಧಿ, ಸುಭದ್ರತೆಗೆ ಆದ್ಯತೆ ನೀಡಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದೆ. ಈ ಬಾರಿ ಕೂಡ ನರೇಂದ್ರಮೋದಿ ಅವರ ನೇತೃತ್ವದಲ್ಲೇ ಕೇಂದ್ರದಲ್ಲಿ ಸರಕಾರ ರಚನೆಯಾಗಲಿದೆ ಎಂದು ಚಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸದಸ್ಯ ಕುಟ್ಟಂಡ ನಂದಾ ಮಾದಪ್ಪ, ಜಿಲ್ಲಾ ಸಹ ಸಂಚಾಲಕ ಸುಬೇದಾರ್ ಮೇಜರ್ ಪಟ್ರಪಂಡ ಕರುಂಬಯ್ಯ, ಸದಸ್ಯ ಸುಬೇದಾರ್ ಮೇಜರ್ ವಾಸಪ್ಪ, ಮಡಿಕೇರಿ ನಗರ ಸಂಚಾಲಕ ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ ಹಾಗೂ ಮಡಿಕೇರಿ ಮಂಡಲ ಸಂಚಾಲಕ ಚೊಂಡೀರ ಕಾರ್ಯಪ್ಪ ಉಪಸ್ಥಿತರಿದ್ದರು.







