ಮಡಿಕೇರಿ ಏ.20 NEWS DESK : ವಾಲ್ನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಪಘಾತ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಬಿಜೆಪಿ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಇದು ಅಪಘಾತ ಪ್ರಕರಣವಾಗಿದೆ, ಆದರೆ ಬಿಜೆಪಿಯ ಮಾಜಿ ಶಾಸಕರುಗಳು ಹಾಗೂ ಪ್ರಮುಖರು ಇದು ಕೊಲೆ ಎಂದು ಹೇಳಿಕೆ ನೀಡಿ ಪ್ರತಿಭಟನೆ ನಡೆಸುವ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಗೆ ಮುಂದಾಗಿದ್ದಾರೆ. ಕೊಡಗಿನ ವಿವಿಧೆಡೆ ಹುಲಿ, ಆನೆ ದಾಳಿಗಳಾಗಿ ಕೃಷಿಕರು ಹಾಗೂ ಕಾರ್ಮಿಕರು ಪ್ರಾಣ ಕಳೆದುಕೊಂಡಾಗ ಪ್ರತಿಭಟನೆ ಮಾಡದೆ ಇದ್ದವರು, ಇದೀಗ ಅಪಘಾತ ಪ್ರಕರಣವನ್ನು ಮುಂದಿಟ್ಟುಕೊಂಡು ಜನರ ಹಾದಿ ತಪ್ಪಿಸುವ ಯತ್ನವಾಗಿ ಚುನಾವಣಾ ಗಿಮಿಕ್ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡಗಿನ ಮತದಾರರು ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಈ ರೀತಿಯ ಕ್ಷುಲ್ಲಕ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಆರೋಪಿಗಳ ವಿರುದ್ಧ ದಾಖಲಾದ ಐಪಿಸಿ 307, 302ಕಲಂ ಅನ್ನು ಕೈ ಬಿಡಬೇಕೆಂದು ಒತ್ತಾಯಿಸಿರುವ ಅಬ್ದುಲ್ ಅಡ್ಕರ್, ತಪ್ಪಿದಲ್ಲಿ ಎಸ್‍ಡಿಪಿಐ ವತಿಯಿಂದ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.








