
ಮಡಿಕೇರಿ ಏ.22 NEWS DESK ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಾಲೆಮಾಡುವಿನಲ್ಲಿ ನಡೆದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಮಂದಿಗೆ ಸಹಾಯವಾಗಿದೆ ಎಂದರು.
ಜನಪರ ಕಾಳಜಿಯ ಕಾಂಗ್ರೆಸ್ ಸರಕಾರ ಮತ್ತು ಪ್ರತಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರುವ ಎಂ.ಲಕ್ಷ್ಮಣ್ ಅವರ ಪರ ಜಿಲ್ಲೆಯ ಮತದಾರರು ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
ಪ್ರಚಾರದ ಸಂದರ್ಭ ಹಂಸ ಅವರು ಐದು ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ಬರಲಿರುವ 25 ಭರವಸೆಗಳ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ಕಾನ್ಶಿರಾಂ ನಗರದ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ಕೆ.ಮೊಣ್ಣಪ್ಪ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕುಸುಮಾವತಿ, ಹಮೀದ್, ವಲಯ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ, ಬೂತ್ ಅಧ್ಯಕ್ಷ ರಂಜಿತ್ ಮೌರ್ಯ, ಹೊದ್ದೂರು ಕಾಂಗ್ರೆಸ್ ಮುಖಂಡ ಭಗವಾನ್ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.








