
ಸೋಮವಾರಪೇಟೆ ಏ.25 NEWS DESK : ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿರುವ ನಗರಳ್ಳಿ ಸುಗ್ಗಿ ಉತ್ಸವವು ಏ.29 ರಂದು ನಗರಳ್ಳಿಯ ಸುಗ್ಗಿ ಬನದಲ್ಲಿ ನಡೆಯಲಿದೆ.
ಸಂಪ್ರಾದಾಯಿಕ ಸುಗ್ಗಿ ಆಚರಣೆಯಂತೆ ಸಬ್ಬಮ್ಮ ದೇವಿಯ ತವರೂರು ಎಂದೆ ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ವಿಶೇಷ ಆಯುದ ಪೂಜೆ ನಡೆಯಿತು.
ಅನಾದಿಕಾಲದಿಂದಲೂ ನಡೆದು ಕೊಂಡು ಬಂದಂತೆ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ನಂತರ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಹಾಕಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಿದರು.
ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ ಗ್ರಾಮ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟಡಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬಿಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಒಡಳ್ಳಿ ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಡಿ.ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗ್ರಾಮದ ಪಟೇಲರಾದ ಬಸವರಾಜ್, ಅರ್ಚರಾದ ಅನಂತ ರಾಮ್ ಮತ್ತಿತರರು ಇದ್ದರು.








