
ಮಡಿಕೇರಿ ಜು.27 NEWS DESK : ಸರ್ಕಾರಿ ಕೆಲಸಕ್ಕೆ ಸೇರುವ ಪ್ರತಿಯೊಬ್ಬರು ಸರ್ಕಾರಿ ಕರ್ತವ್ಯ ಎಂದು ಭಾವಿಸದೆ ಅದನ್ನು ಜನರ ಸೇವೆ ಎಂದೇ ಪರಿಗಣಿಸಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಿವಿಮಾತು ಹೇಳಿದರು. ವಿಧಾನಸೌಧದಲ್ಲಿರುವ ಪೊನ್ನಣ್ಣ ಅವರ ಕಛೇರಿಗೆ ಆಡಳಿತಾತ್ಮಕ ಸಲಹೆ ಕೇಳಲು ಬಂದ ನೂತನವಾಗಿ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಯಾವುದೇ ಸರ್ಕಾರಿ ಅಧಿಕಾರಿ ಕೆಲಸ ಆರಂಭಿಸುವಾಗ ಜನರ ಸೇವೆ ಮಾಡುತ್ತೇನೆ ಎಂಬ ಸಂಕಲ್ಪತೊಟ್ಟು ವೃತ್ತಿ ಆರಂಭಿಸಬೇಕು. ಸಾಮಾನ್ಯ ಜನರಿಗೆ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಜ್ಞಾನ ಪೂರ್ಣವಾಗಿ ಇರುವುದಿಲ್ಲ. ಹಾಗಾಗಿ ಅವರನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಜನಾನುರಾಗಿ ಅಧಿಕಾರಿ ಎಂದು ಗುರುತಿಸಿಕೊಳ್ಳಲು ಸಾಧ್ಯ ಎಂದು ಪೊನ್ನಣ್ಣ ಸಲಹೆ ನೀಡಿದರು.








