
ಮಡಿಕೇರಿ ಆ.22 NEWS DESK : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ ಒಟ್ಟು ರೂ.13074.44 ಲಕ್ಷಗಳ ವಹಿವಾಟು ನಡೆಸಿದ್ದು, ರೂ.54.08 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡುವ ಬಗ್ಗೆ ವಾರ್ಷಿಕ ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದರು. ಸಂಘದಲ್ಲಿ ಎ ತರಗತಿಯ 1165 ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳ ರೂ.119.84 ಲಕ್ಷಗಳಷ್ಟಿದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ 355.38 ಲಕ್ಷ ಹಾಗೂ ನಿರುಖು ಠೇವಣಿ ಸಂಚಯ ಠೇವಣಿ ಮತ್ತು ಇತರೆ ಠೇವಣಿ ಸೇರಿ ಒಟ್ಟು ರೂ 1698.87 ಲಕ್ಷಗಳಿದೆ. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರುಖು ಠೇವಣಿ ಮತ್ತಿತರ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.641.19 ಲಕ್ಷಗಳನ್ನು ಠೇವಣಿ ಮಾಡಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ 2023-24ನೇ ಸಾಲಿನಲ್ಲಿ ರೂ.1926.33 ಲಕ್ಷ ಸಾಲವನ್ನು ವಿತರಿಸಲಾಗಿದೆ. ಸಂಘವು ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್ ಇನ್ನೊ, ಫ್ಯಾಕ್ಟ್, ಪ್ಯೂಚರ್ ಫರ್ಟಿಲೈಸರ್ಸ್ ಜುವಾರಿ, ಕೋರಮಂಡಲ್, ಸ್ಟೇನ್ಸ್, ಸಂಸ್ಥೆಗಳ ಸಗಟು ಮತ್ತು ರಿಟೇಲ್ ಲೈಸನ್ಸ್ ಹೊಂದಿದ್ದು ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಮಾಗ್ರಿ ಬಾಪ್ತು ರೂ.486.70 ಲಕ್ಷಗಳ ವಹಿವಾಟು ನಡೆಸಿ ರೂ.19.81 ಲಕ್ಷಗಳ ವ್ಯಾಪಾರ ಲಾಭಗಳಿಸಲಾಗಿದೆ. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತ ಸದಸ್ಯರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರವನ್ನು ಅಳವಡಿಸಲಾಗಿದೆ. ಸಂಘದ ಮುಖ್ಯ ಕಛೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದೆ. ಇ-ಸ್ಟ್ಯಾಂಪ್ ಮತ್ತು ಆರ್‍ಟಿಸಿ ಸೌಲಭ್ಯವನ್ನು ಕೂಡ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಸಂಘದ ಈರಳೆವಳಮುಡಿ ಶಾಖೆಯಲ್ಲಿ ಚೋಳಪಂಡ ಕುಟುಂಬಸ್ಥರು ದಾನವಾಗಿ ನೀಡಿದ ಜಾಗದಲ್ಲಿ 1930ರಲ್ಲಿ ನಿರ್ಮಿಸಲಾದ ಕಟ್ಟಡ ಶಿಥಿಲಾವಸ್ಥೆಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ದುರಸ್ತಿ ಮತ್ತು ನವೀಕರಣಗೊಳಿಸಿ ನ್ಯಾಯಬೆಲೆ ಅಂಗಡಿ ಹಾಗೂ ಮೂರು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಮಾಹಿತಿ ನೀಡಿದರು. ತಾವು ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭ ನಷ್ಟದಲ್ಲಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಎಲ್ಲರ ಸಹಕಾರದಿಂದ ಲಾಭದೆಡೆಗೆ ಕೊಂಡೊಯ್ಯಲಾಗಿದೆ. ರಾಜಕೀಯ ರಹಿತ ಆಡಳಿತ ಮತ್ತು ಒಗ್ಗಟ್ಟಿನಿಂದ ಮಾತ್ರ ಇದು ಸಾಧ್ಯವಾಗಿದೆ. ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
::: ಮಹಾಸಭೆ ::: ಸಂಘದ 47ನೇ ಮಹಾಸಭೆ ಆ.25ರಂದು ಬೆಳಿಗ್ಗೆ 10ಗಂಟೆಗೆ ಸಂಘದ ಶ್ರೀನರೇಂದ್ರಮೋದಿ ಭವನದಲ್ಲಿ ನಡೆಯಲಿದ್ದು, ಎಲ್ಲಾ ಸದಸ್ಯರು ಪಾಲ್ಗೊಳ್ಳುವಂತೆ ಮಣಿ ಉತ್ತಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಎಸ್.ಪೂಣಚ್ಚ, ನಿರ್ದೇಶಕರುಗಳಾದ ಕೊಂಗೇಟೀರ ವಾಣಿ ಕಾಳಪ್ಪ, ಬಿ.ಎಂ.ಕಾಶಿ, ಮುಳ್ಳಂಡ ಎ.ಮಾಯಮ್ಮ ಹಾಗೂ ಅಕ್ಕಾರಿ ಆರ್.ದಯಾನಂದ ಉಪಸ್ಥಿತರಿದ್ದರು.








