
ಬೆಂಗಳೂರು NEWS DESK ಜು.20 : ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸುವ ಕಂದಾಯ ಇಲಾಖೆಯ ವಿಶೇಷ ಅಭಿಯಾನ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಗೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಪಿಡಿಎಫ್ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದ್ದು, ಇವುಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಮನೆ ಮನೆಗೆ ತೆರಳಿ ಉಚಿತವಾಗಿ ನೀಡುವ ಈ ವಿಶೇಷ ಅಭಿಯಾನದ ಜೊತೆಗೆ, ಸಾರ್ವಜನಿಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್‌ಸೈಟ್ (https://nadakacheri.karnataka.gov.in/AJSKCertificates) ಹಾಗೂ ಪ್ರತಿ ಹೋಬಳಿ ಮಟ್ಟದಲ್ಲಿ ಉಚಿತ ಮುದ್ರಣದ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ವಾಟ್ಸ್ಆಪ್ ಅಥವಾ ಎಸ್‌ಎಂಎಸ್ ಮೂಲಕ ನೇರ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ರಾಜ್ಯದಾದ್ಯಂತ ಏಕರೂಪದ, ಪಾರದರ್ಶಕ ಮತ್ತು ಕಾನೂನುಬದ್ಧವಾದ ಚೌಕಟ್ಟಿನಡಿಯಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಿಸುವ ಮಹತ್ವದ ಸೇವೆಗೂ ಆದ್ಯತೆಯ ಮೇರೆಗೆ ಚಾಲನೆ ನೀಡಲಾಗಿದೆ. ನಾಗರಿಕರು ಈ ಪ್ರಮಾಣ ಪತ್ರವನ್ನು ಪಡೆಯಲು ಹತ್ತಿರದ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳು ಅಥವಾ ಅಧಿಕೃತ ಜಾಲತಾಣದ (https://ajsk.karnataka.gov.in/nk5_online/Login/Login_Public) ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

