
ಮಡಿಕೇರಿ ಆ.22 NEWS DESK : ಮುಡಾ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದಲ್ಲಿ ಮಾನವ ಸರಪಳಿ ಸಹಿತ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತನಿಖೆÉಗೆ ಸಹಕರಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಮುಡಾದಿಂದ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದುಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ಮುಡಾದಿಂದ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನ್ಯಾಯಯುತವಾಗಿ ಪ್ರಾಸಿಕ್ಯೂಶನ್‍ಗೆ ಅವಕಾಶ ನೀಡಿದ್ದಾರೆ. ಹೀಗಿದ್ದೂ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ಧ ಟೀಕೆ ಮಾಡುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಬೆಲೆಬಾಳುವ ನಿವೇಶನಗಳನ್ನು ಮುಡಾದಿಂದ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಗಳನ್ನು ಅರಿತು ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅವಕಾಶ ನೀಡಿದ್ದಾರೆ. ರಾಜ್ಯಪಾಲರ ನ್ಯಾಯಯುತವಾದ ನಿರ್ಧಾರಗಳನ್ನು ಕಾಂಗ್ರೆಸ್ ಪ್ರಮುಖರು ವಿರೋಧಿಸಿ ಅವರ ವಿರುದ್ಧ ಅವಾಚ್ಯವಾಗಿ ಮಾತನಾಡುತ್ತಿರುವುದು ಸಮಂಜಸವಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ತನಿಖೆಯ ಸಂದರ್ಭ ಅವರ ರಾಜೀನಾಮೆಯನ್ನು ಕೇಳಿದ್ದ ಸಿದ್ದರಾಮಯ್ಯ ಅವರು, ಈಗ ತಮ್ಮ ವಿರುದ್ಧ ಆರೋಪಗಳಿದ್ದರೂ ಯಾಕೆ ರಾಜೀನಾಮೆ ನೀಡುತ್ತಿಲ್ಲವೆಂದು ಪ್ರಶ್ನಿಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲ್ಲಾಡಳಿತದ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪಕ್ಷದ ಪ್ರಮುಖರಾದ ರಾಬಿನ್ ದೇವಯ್ಯ, ಸುವಿನ್ ಗಣಪತಿ, ಅನಿತಾ ಪೂವಯ್ಯ, ಯಮುನಾ ಚಂಗಪ್ಪ, ತಳೂರು ಕಿಶೋರ್ ಕುಮಾರ್, ಕನ್ನಂಡ ಸಂಪತ್, ಕವನ್ ಕಾರ್ಯಪ್ಪ, ನೆಲ್ಲೀರ ಚಲನ್, ಕೋಡಿ ಪೊನ್ನಪ್ಪ, ಮಹೇಶ್ ಜೈನಿ, ಮನು ಮಂಜುನಾಥ್, ನಾಗೇಶ್ ಕುಂದಲ್ಪಾಡಿ, ಕಾಂಗೀರ ಸತೀಶ್, ಉಮೇಶ್ ಸುಬ್ರಮಣಿ, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಮನು ಮುತ್ತಪ್ಪ, ಸವಿತಾ ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.








