
ನಾಪೋಕ್ಲು ಸೆ.13 NEWS DESK : ಚೆಂಬುವಿನ ಊರುಬೈಲು ಸ.ಹಿ.ಪ್ರಾ.ಶಾಲೆಯಲ್ಲಿ ಸಂಪಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಪಿ.ಮಹೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಚೆಂಬು ಗ್ರಾ.ಪಂ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಸುಂದರ ವೇದಿಕೆಯಾಗಿದೆ. ಇದು ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸುವ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು. ಗ್ರಾ.ಪಂ ಸದಸ್ಯ ರಮೇಶ ಹುಲ್ಲುಬೆಂಕಿ ಮಾತನಾಡಿ, ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಗುರುತಿಸುವ ಕಾರ್ಯಕ್ರಮವಾಗಿದೆ ಎಂದರು. ಗ್ರಾ.ಪಂ ಚೆಂಬು ಸದಸ್ಯೆ ಕುಸುಮ ಮಾತನಾಡಿ, ಪ್ರತಿಭಾ ಕಾರಂಜಿ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಸ್ಪರ್ಧಾ ಮನೋಭಾವವನ್ನು ಮೂಡಿಸುವ ಉತ್ತಮ ಕಾರ್ಯಕ್ರಮವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ ಪೆರಾಜೆ ಮಾತನಾಡಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾಗಿರುವ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯ, ಸೋಲು-ಗೆಲುವು ಸಾಮಾನ್ಯ, ಅವೆರಡನ್ನೂ ವಿಮರ್ಶೆ ಮಾಡಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಪ್ರತಿಭಾ ಕಾರಂಜಿ ಯಶಸ್ವಿಯಾಗಲಿ ಎಂದರು. ಗ್ರಾ.ಪಂ ಸದಸ್ಯ ಎನ್.ಟಿ. ವಸಂತ, ಸಿ.ಆರ್.ಪಿ ಚಂದ್ರಶೇಖರ, ಮುಖ್ಯಶಿಕ್ಷಕ ಕೆ.ಆರ್.ಸೋಮಣ್ಣ ಹಾಜರಿದ್ದರು. ಈ ಸಂದರ್ಭ ಎಸ್.ಡಿ.ಎಂ.ಸಿ ಸಮಿತಿ, ಪೋಷಕರು, ಏಳು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು. ತೀರ್ಪುಗಾರರಾಗಿ ಪೆರಾಜೆ ಕ್ಲಸ್ಟರಿನ ಶಿಕ್ಷಕರು ಕಾರ್ಯನಿರ್ವಹಿಸಿದರು. ಎಲ್ಲಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆದು ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ವರದಿ : ದುಗ್ಗಳ ಸದಾನಂದ.








