

ಮಡಿಕೇರಿ NEWS DESK ಸೆ.14 : ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರಯತ್ನದ ಫಲವಾಗಿ ಈ ವರ್ಷದಿಂದ ಮಡಿಕೇರಿ ದಸರಾ ಉತ್ಸವಕ್ಕೆ ಕಾಫಿ ದಸರಾ ಸೇರ್ಪಡೆ ಆಗಿದೆ. ಕೊಡಗು ಕಾಫಿ ಕೃಷಿ ಜಿಲ್ಲೆ ಆಗಿರುವುದರಿಂದ ಕಾಫಿ ಕೃಷಿಕರಿಗೆ ಸೂಕ್ತ ಮಾಹಿತಿ, ಕಾಫಿಯ ಪ್ರಯೋಜನ, ತೋಟಗಾರಿಕಾ ಕೃಷಿ ಮಾಹಿತಿ ಸಂಬಂಧಿತ 20 ಮಳಿಗೆಗಳು ಕಾಫಿ ದಸರಾ ದಲ್ಲಿ ಇರುತ್ತವೆ. ಮೊದಲ ದಿನ ಕಾಫಿ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ಕೂಡ ಜರುಗಲಿದ್ದು ಕರ್ನಾಟಕ ಬೆಳೆಗಾರರ ಒಕ್ಕೂಟ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ ಸಹಕಾರವನ್ನು ಕೊಡಲಾಗುತ್ತದೆ. ಅಕ್ಟೋಬರ್ 6 ಮತ್ತು 7 ರಂದು ಈ ಕಾರ್ಯಕ್ರಮ ಆಯೋಜಿತ ಆಗಿದೆ. ಕಾಫಿ ಕೃಷಿಕರಿಗೆ ಸೂಕ್ತ ಮಾಹಿತಿ ನೆರವು ದೊರಕಬೇಕು ಎಂಬ ನಿಟ್ಟಿನಲ್ಲಿ ಶಾಸಕ ಮಂತರ್ ಗೌಡ ಅವರ ವಿಶೇಷ ಪ್ರಯತ್ನ ಈ ಕಾಫಿ ದಸರಾ ಆಗಿದೆ. ಮಕ್ಕಳ ದಸರಾ 11 ವರ್ಷ, ಮಹಿಳಾ ದಸರಾ 7 ವರ್ಷ, ಜನಪದ ದಸರಾ 5 ವರ್ಷ ಪೂರೈಸುತ್ತಿದ್ದು, ಮಡಿಕೇರಿ ದಸರಾಕ್ಕೆ ಮತ್ತೊಂದು ಪ್ರಯತ್ನವಾಗಿ ಕಾಫಿ ದಸರಾ ಸೇರ್ಪಡೆಯಾಗುತ್ತಿದೆ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಅನಿಲ್ ಹೆಚ್. ಟಿ ತಿಳಿಸಿದ್ದಾರೆ.








