
ವಿರಾಜಪೇಟೆ ಡಿ.7 NEWS DESK : ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಚೆನ್ನಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಚೆನ್ನಂಗಿ ಶಾಲೆಗೆ ಭೇಟಿ ನೀಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಆ ಶಾಲೆಯ ಮಕ್ಕಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪಠ್ಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿಚಾರ ವಿನಿಮಯವನ್ನು ನಡೆಸಿ ಮಾಹಿತಿಯನ್ನು ಪಡೆದರು. ಎರಡು ಶಾಲೆಯ ಮಕ್ಕಳು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಸಮೀಪದ ಹಾಡಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಶಿಕ್ಷಣದ ಮಹತ್ವ, ಬಾಲ್ಯ ವಿವಾಹದ ಪರಿಣಾಮ ಮತ್ತು ದುಶ್ಚಟಗಳ ಪರಿಣಾಮದ ಬಗ್ಗೆ ಕಿರುನಾಟಕದ ಮೂಲಕ ಅರಿವು ಮೂಡಿಸಿದರು. ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ರವೀಂದ್ರ ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಡಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಈ ಶಾಲೆಗೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭ ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ನ ಸಿಆರ್ ಪಿ ಸುಶ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಂಜನ್, ಶಾಲಾ ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಸಹ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಾಡಿ ನಿವಾಸಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ರವೀಂದ್ರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.











