
ಮಡಿಕೇರಿ ಡಿ.11 NEWS DESK : ಅಕ್ಷರಗಳಿಗೆ ಮತ್ತು ಓದುವ ಹವ್ಯಾಸಕ್ಕೆ ತನ್ನದೇ ಆದ ಶಕ್ತಿ ಇದ್ದು, ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ವಿಕೆ3 ಪಿಕ್ಚರ್ಸ್‍ನಡಿ ತಾವು ರಚಿಸಿರುವ ಮೂರನೇ ಪುಸ್ತಕ ‘ವಾಸ್ತವ’ (ಮನಗಳ ಮಂಥನ) ಕಥಾ ಪುಂಜ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚೆಗೆ ಅಕ್ಷರಗಳಿಗಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೈಬರಹಗಳನ್ನು ಮರೆಯುವ ಪರಿಸ್ಥಿತಿ ಎದುರಾಗಿದೆ, ಈ ಬೆಳವಣಿಗೆ ಒಳ್ಳೆಯದಲ್ಲ. ಕೈಬರಹಗಳಿಗೆ ತನ್ನದೇ ಆದ ಶಕ್ತಿ ಇದೆ, ಅಕ್ಷರಗಳನ್ನು ಯಾರೂ ಮರೆಯಬಾರದು. ಬರೆಯುವ ಮತ್ತು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಹರಿಣಿ ವಿಜಯ್ ಕರೆ ನೀಡಿದರು. ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಿದೆ, ಓದುವ ಹವ್ಯಾಸ ಬೆಳೆಸಿಕೊಂಡಾಗ ಸಮಾಜದಲ್ಲಿ ಪರಿವರ್ತನೆಯನ್ನು ಕಾಣಬಹುದಾಗಿದೆ. ತಾವು ರಚಿಸಿರುವ ಮೂರನೇ ಪುಸ್ತಕ ‘ವಾಸ್ತವ’ದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಮನದಾಳದ ಮಾತುಗಳನ್ನು ಅಕ್ಷರದ ರೂಪದಲ್ಲಿ ಹೊರ ಹಾಕಿದ್ದೇನೆ. ಹೆಣ್ಣಿನ ಕುರಿತು ಸಮಾಜದಲ್ಲಿ ಇಂದಿಗೂ ಮೂಢ ನಂಬಿಕೆಗಳಿವೆ. ಪುಸ್ತಕದಲ್ಲಿ ಒಟ್ಟು 10 ಕಥೆಗಳಿದ್ದು, ಪ್ರತಿ ಕಥೆಯಲ್ಲೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದೇನೆ ಎಂದರು. ಪ್ರತಿಯೊಬ್ಬರು ಬರೆಯುವ ಮತ್ತು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ‘ವಾಸ್ತವ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಮತ್ತು ಖ್ಯಾತಿ ಗಳಿಸಬೇಕು ಎನ್ನುವ ಆಕಾಂಕ್ಷೆಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ವಾಸ್ತವವಾಂಶಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಇದು ಸಾಧ್ಯ ಎಂದರು. ವಾಸ್ತವಕ್ಕೆ ಹತ್ತಿರವಾದ ವಿಚಾರಗಳಿಗೆ ತಮ್ಮ ಕಲ್ಪನೆಯ ಸ್ಪರ್ಷ ನೀಡಿ ‘ವಾಸ್ತವ’ ಪುಸ್ತಕಕ್ಕೆ ಬರಹಗಾರ್ತಿ ಹರಿಣಿ ವಿಜಯ್ ಅವರು ಜೀವ ತುಂಬಿದ್ದಾರೆ. ಮಹಿಳೆಯೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಮೂರ್ನಾಡಿನಲ್ಲಿ ಹರಿಣಿ ಅವರ ನೇತೃತ್ವದಲ್ಲಿ ನಡೆದ ಅದ್ದೂರಿಯ ಕನ್ನಡ ಹಬ್ಬವೇ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮತ್ತಷ್ಟು ಪುಸ್ತಕಗಳು ರಚನೆಯಾಗಲಿ ಎಂದು ಕರೆ ನೀಡಿದರು. ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಮಾತನಾಡಿ ಸಿನಿಮಾ ಅಥವಾ ಸಾಕ್ಷ್ಯಚಿತ್ರವಾಗಲು ಯೋಗ್ಯವಾಗಿರುವ ‘ಅಗ್ನಿಯಾತ್ರೆ’ಯಂತಹ ಅದ್ಭುತ ಕಾದಂಬರಿಯನ್ನು ರಚಿಸಿರುವ ಹರಿಣಿ ವಿಜಯ್ ಅವರು ಇದೀಗ ತಮ್ಮ ಉತ್ತಮ ಚಿಂತನೆ ಮತ್ತು ಕಲ್ಪನೆಗೆ ‘ವಾಸ್ತವ’ ಪುಸ್ತಕದಲ್ಲಿ ಅಕ್ಷರದ ರೂಪ ನೀಡಿ ಯಶಸ್ವಿಯಾಗಿದ್ದಾರೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ದಿನದಿಂದ ದಿನಕ್ಕೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಬರಹಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರವೇ ಖುದ್ದು ಪುಸ್ತಕಗಳನ್ನು ಖರೀದಿಸಬೇಕು ಮತ್ತು ವಿದ್ಯಾರ್ಥಿ ನಿಲಯ ಹಾಗೂ ಗ್ರಂಥಾಲಯಗಳಿಗೆ ಹಂಚಬೇಕು ಎಂದು ಮನವಿ ಮಾಡಿದರು. ಇಂದು ಹೆಚ್ಚಾಗಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇಲ್ಲಿ ಉತ್ತಮ ವಿಚಾರಗಳ ಬಗ್ಗೆ ಚರ್ಚಿಸದೆ ಮತ್ತೊಬ್ಬರನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನೊಬ್ಬರನ್ನು ನಿಂದಿಸುವುದು ಸಾಧನೆಯಲ್ಲ, ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಮಹಿಳಾ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿರುವುದು ಸ್ವಾಗತಾರ್ಹ. ಕೆಲಸ ಮತ್ತು ಜೀವನದ ಜಂಜಾಟದ ನಡುವೆಯೂ ಮಹಿಳೆಯರು ಪುಸ್ತಕ ರಚನೆಗೆ ಆಸಕ್ತಿ ತೋರುತ್ತಿದ್ದಾರೆ, ಮಹಿಳಾ ಬರಹಗಾರರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಿರಿ ಗನ್ನಡ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿ ಕೊಡಗಿನಲ್ಲಿ ವೈಚಾರಿಕತೆಯ ಬರಹಗಳ ಕೊರತೆ ಇದೆ, ಇದನ್ನು ತುಂಬುವ ಪ್ರಯತ್ನವನ್ನು ಹರಿಣಿ ವಿಜಯ್ ಮಾಡುತ್ತಿದ್ದಾರೆ ಎಂದರು. ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕೊಡವಕೇರಿಯ ನಿರ್ದೇಶಕಿ ಬೊಳ್ಳಜಿರ ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.
::: ಪುಸ್ತಕಗಳು ದೊರೆಯುವ ಸ್ಥಳ ::: ಮಡಿಕೇರಿಯ ಅರುಣ್ ಸ್ಟೋರ್, ನೀಲಕಂಠೇಶ್ವರ ಸ್ಟೋರ್, ವಿನೋದ್ ಮೆಡಿಕಲ್ಸ್ ಮತ್ತು ಮೂರ್ನಾಡಿನ ಅಮ್ಮ ಮೆಡಿಕಲ್ಸ್, ಐಶ್ವರ್ಯ ಸ್ಟೋರ್
::: ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಪರಿಚಯ ::: ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ, ಬರಹಗಾರ್ತಿಯಾಗಿರುವ ಈರಮಂಡ ಹರಿಣಿ ವಿಜಯ್ ಅವರ ಮೂರನೇ ಪುಸ್ತಕ “ವಾಸ್ತವ” (ಮನಗಳ ಮಂಥನ) ಕಥಾ ಪುಂಜ ವಿಕೆ3 ಪಿಕ್ಚರ್ಸ್ ಬ್ಯಾನರ್ ನಡಿ ಲೋಕಾರ್ಪಣೆಗೊಂಡಿದೆ. “ಬದುಕು” ಕನಸುಗಳ ಸಪ್ತಸಾಗರ ಭಾವನೆಗಳ ಆಗರ! ಬದುಕೆಂಬ ಜಟಕಾ ಬಂಡಿಯನ್ನು ಹೊತ್ತು ಸಾಗುವ ಪ್ರತಿ ಮನಸ್ಸುಗಳಲ್ಲಿಯೂ ಕನಸುಗಳಿರುತ್ತವೆ ಎಂಬುದೇ ಈ “ವಾಸ್ತವ” ಕಥಾ ಪುಂಜದ ಸಾರಾಂಶವಾಗಿದೆ. ಗಾಳಿಪಟದಂತೆ ಆಕಾಶದಲ್ಲಿ ಹಾರಾಡುವ ಆಸೆ ಇಟ್ಟುಕೊಂಡಿರುವ ಹೆಣ್ಣಿಗೆ ಗಾಳಿಪಟದ ಸೂತ್ರಧಾರಿ ಹೇಗೆ ತನ್ನ ಜೀವನವನ್ನು ನಡೆಸುವನು ಎಂಬ ಭಯದಲ್ಲಿರುವ ಪುಟ್ಟ ಮಗುವಿನ ಕಥೆಯನ್ನು ವಾಸ್ತವ ರೂಪದಲ್ಲಿ ಹೇಳಲಾಗಿದೆ. ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ, ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಈರಮಂಡ ಹರಿಣಿ ವಿಜಯ್ ಅವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಕೋಡಂಬೂರು ಗ್ರಾಮದ ನಿವಾಸಿ. ಇವರ ಪತಿ ಈರಮಂಡ ವಿಜಯ್ ಉತ್ತಯ್ಯ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಸರಿ ಬೋಜಮ್ಮ ಹಾಗೂ ಕುಶಿ ಕಾವೇರಮ್ಮ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗಾಗಲೇ ಬದುಕಿನ ಚಕ್ರ (ನಾಟಕ), ಅಗ್ನಿ ಯಾತ್ರೆ (ಕಾದಂಬರಿ) ಪುಸ್ತಕ ಬಿಡುಗಡೆಗೊಂಡಿದ್ದು, “ವಾಸ್ತವ” (ಮನಗಳ ಮಂಥನ) ಕಥಾ ಪುಂಜ ಹರಿಣಿ ವಿಜಯ್ ಅವರ ಮೂರನೇ ಪುಸ್ತಕವಾಗಿದೆ. 2016ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ಕೊಡವ ನೃತ್ಯ ಉಮ್ಮತ್ತಾಟ್ ಶಿಬಿರದಲ್ಲಿ ಪತಿಯ ಪ್ರೋತ್ಸಾಹದೊಂದಿಗೆ ಕೊಡಗಿನ ಆಸಕ್ತ ಯುವತಿಯರಿಗೆ ಉಮ್ಮತ್ತಾಟ್ ನ್ನು ಕಲಿಸಿ ಜಿಲ್ಲೆಯ ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಕಲೆಯನ್ನು ಪೋಷಿಸಿದ್ದಾರೆ. ನಂತರ “ನಂಗ ಕೊಡವ” ಎಂಬ ಕೊಡವ ಧಾರಾವಾಹಿಯಲ್ಲಿ ನಟಿಸಿದ್ದು, ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಕನ್ನಡದ ಖ್ಯಾತ ನಟ ನಟಸಾರ್ವಭೌಮ ದಿ.ಪುನೀತ್ ರಾಜಕುಮಾರ್ ಅವರು ನಡೆಸಿ ಕೊಡುತ್ತಿದ್ದ “ಫ್ಯಾಮಿಲಿ ಪವರ್” ರಿಯಾಲಿಟಿ ಶೋದಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು. ಇವರು ಕೊಡವ ಭಾಷೆಯ ಮೇಲಿನ ಅಭಿಮಾನದಿಂದ 2020ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಕೆ3 ಪಿಕ್ಚರ್ಸ್ ಎಂಬ ಸಂಸ್ಥೆ /ಬ್ಯಾನರನ್ನು ನೋಂದಾಯಿಸಿ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಕೊಡವ ಪದ್ಧತಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಒಳಗೊಂಡ ಸಾಮಾಜಿಕ ಸಂದೇಶ ಸಾರುವ ಮಹಿಳಾ ಪ್ರಧಾನ ಚಿತ್ರ “ನಾಡ ಪೆದ ಆಶಾ” ವನ್ನು ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ನಟನೆಯನ್ನೂ ಮಾಡಿದ್ದಾರೆ. ಈ ಚಿತ್ರ ಕೊಡಗಿನೆಲ್ಲೆಡೆ ಎಲ್‍ಇಡಿ ಪರದೆಯ ಮೇಲೆ 123 ಪ್ರದರ್ಶನ ಕಂಡಿದೆ ಹಾಗೂ ವಿವಿಧ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿನಗೊಂಡು ದೇಶ ವಿದೇಶಗಳ ಸಿನಿಪ್ರಿಯರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದು 78 ವಿವಿಧ ವಿಭಾಗಗಳಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡು 201 ಪ್ರದರ್ಶನ ಕಂಡ ಚಿತ್ರವನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ. ಕೊಡವ ಭಾಷೆ, ಸಂಸ್ಕೃತಿಯನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾದ ಮೂಲಕ ಪಸರಿಸಿದ ಇವರು “ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾದಲ್ಲಿ ನಟನೆಯೊಂದಿಗೆ ಸಿನಿಮಾಕ್ಕೆ ಇಂಗ್ಲಿಷ್ ನಲ್ಲಿ ಸಂಭಾಷಣೆಯನ್ನು ಬರೆದು ತಾಂತ್ರಿಕ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದು ಈ ಸಿನಿಮಾಕ್ಕೂ 15ಕ್ಕೂ ಹೆಚ್ಚು ವಿವಿಧ ಪ್ರಶಸ್ತಿ ಗಳು ಲಭಿಸಿದೆ. ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪರವರ ನಿರ್ದೇಶನದ “ಢಾಕ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನ ವಲ್ರ್ಡ್ ಪ್ರೀಮಿಯರ್ ಶೋ, ಮತ್ತು 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಗೊಂಡು ಪ್ರದರ್ಶನಗೊಂಡ “ಬೇರ್” (THE ROOT) “ಕಾಂಗತ ಮೂಡ್…THE SHADOW” ಎಂಬ ಕೊಡವ ಸಿನಿಮಾಗಳ ಸಂಭಾಷಣೆಕಾರ್ತಿ ಮತ್ತು ಸಹ ನಿರ್ದೇಶಕಿಯಾಗಿದ್ದಾರೆ. ಅಲ್ಲದೆ ಕನ್ನಡ ಚಲನಚಿತ್ರ “ದೃಶ್ಯ-2, ನೀ ಮಾಯೇಯೊಳಗೊ ಮಾಯೇ ನಿನ್ನಳೋಗೋ,” 29ನೇ ಕೊಲ್ಕತ್ತಾ ಇಂಟರ್ ನ್ಯಾಷನಲ್ ಫೆಸ್ಟಿವಲ್ ನಲ್ಲಿ ಏಶಿಯನ್ ಫಿಲಂ ಕಾಂಪಿಟೇಷನ್ ಹಾಗೂ 2024ರ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ದ್ವಿತೀಯ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದ “ಕಂದೀಲು” ಚಿತ್ರಗಳಲ್ಲಿ ನಟಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಒಲವು ಹೊಂದಿರುವ ಈರಮಂಡ ಹರಿಣಿ ವಿಜಯ್ “ಬದುಕಿನ ಚಕ್ರ” ನಾಟಕ ಕೃತಿ ಹಾಗೂ “ಅಗ್ನಿ ಯಾತ್ರೆ” ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. “ವಿಶ್ವಾಂಬರ ಕವನಗಳು” ಎಂಬ ಕವನ ಸಂಕಲನದ ಸಂಪಾದಕರಾಗಿದ್ದು, ಪ್ರಸ್ತುತ ಸಮಾಜದ ಆಗು-ಹೋಗುಗಳ ಬಗ್ಗೆ ಹಲವಾರು ಕವನಗಳು, ಹಲವು ಬರಹಗಾರರ ಪುಸ್ತಕಗಳ ವಿಮರ್ಶೆಗಳು ಮತ್ತಿತರ ಬರಹಗಳು ಕೊಡಗಿನ ಹೆಸರಾಂತ ದಿನಪತ್ರಿಕೆ “ಶಕ್ತಿ”ಯಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮನೆಮದ್ದು ವಿಭಾಗದಲ್ಲಿ ಅಂಕಣಬರಹಗಳನ್ನು ಹಾಗೂ ಶಕ್ತಿ ದಿನಪತ್ರಿಕೆಯಲ್ಲಿ ವಿವಿಧ ಬರಹಗಳನ್ನು ಬರೆಯುತ್ತಿದ್ದಾರೆ.
ಅಲ್ಲದೇ ಮಡಿಕೇರಿ ಆಕಾಶವಾಣಿಯಲ್ಲಿ ಇವರ ಯಶಸ್ವಿ ಪಯಣದ ಸಾಹಿತ್ಯ ಸಂವಾದ ಬಿತ್ತರಗೊಂಡಿದ್ದು, ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದ ರಾಜ್ಯ ಮಟ್ಟದ ಖಿದ್ಮಾ ಕಾವ್ಯ ಸಾಂಸ್ಕೃತಿಕ ಸಂಭ್ರಮದಲ್ಲಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ. 2024ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಇಓಖಿ ವೈದ್ಯರ AOICON-24 ಸಮಾವೇಶದಲ್ಲಿ 25 ಜನರ ತಂಡ ಕಟ್ಟಿ ಕೊಡಗಿನ ಸಂಸ್ಕೃತಿಯನ್ನು ನೃತ್ಯ ಹಾಗೂ ಫ್ಯಾಶನ್ ಶೋ ಮುಖಾಂತರ ಪಸರಿಸಿ ಮೆಚ್ಚುಗೆ ಪಡೆದಿರುತ್ತಾರೆ. ಜ್ಞಾನ ವಿಶಾರದೇ ಸನ್ಮಾನ ಗೌರವ ಪುರಸ್ಕಾರ ಪಡೆದ ಬಾಗಲಕೋಟೆಯ ಶಿಕ್ಷಕ ಹಾಗೂ ಸಾಹಿತಿ ಮುತ್ತು ವಡ್ಡರ ಅವರ ಎಲೆಮರೆಯ ಕಾಯಿಗಳು ಎಂಬ ಸಾಧಕರ ಪರಿಚಯ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೈಸೂರು ಪುರಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವಿವಿಧ ಕ್ಷೇತ್ರದ ಕಲಾವಿದರುಗಳಿಗೆ ಹಾಗೂ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿಯಲ್ಲಿ ಸಿನಿಮಾ, ಸಾಹಿತ್ಯ, ಕಲಾ ಸೇವೆ ಯನ್ನು ಪರಿಗಣಿಸಿ “ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ”, ಕನ್ನಡ ಸಾಹಿತ್ಯ ಪರಿಷತ್ ನೀಡುವ ಕೊಡಗಿನ ಹೆಸರಾಂತ ಸಾಹಿತಿ “ಕೊಡಗಿನ ಗೌರಮ್ಮ ಪ್ರಶಸ್ತಿ”, ಕೊಡಗಿನ ಹೆಸರಾಂತ ಜನಪ್ರಿಯ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ “ದಿ.ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಪ್ರಶಸ್ತಿ” ಪಡೆದಿದ್ದಾರೆ.
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರು, ಕೊಡಗು ಸಿರಿಗನ್ನಡ ವೇದಿಕೆಯ ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರು, ಕರ್ನಾಟಕ ಸ್ಕೌಟ್ ಅಂಡ್ ಗೈಡ್ಸ್ ನ ಕೊಡಗು ಸಂಸ್ಥೆಯ ಗೈಡ್ ಸಹ ಕಾರ್ಯದರ್ಶಿ, ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ನ ಸ್ಥಾಪಕಾಧ್ಯಕ್ಷೆ ಹಾಗೂ ಟ್ರಸ್ಟಿ, ಕೊಡಗು ಕಲಾವಿದರ ಸಂಘದ (ರಿ) ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.









