
ಮಡಿಕೇರಿ ಫೆ.3 NEWS DESK : ಕೇಂದ್ರದ 2024-25ನೇ ಸಾಲಿನ ಬಡ್ಜೆಟ್‍ನಲ್ಲಿ ರಾಜ್ಯಕ್ಕೆ ಕೇವಲ ನಾಮ ತೀಡಿದ ಚೆಂಬು ಮತ್ತು ಚಿಪ್ಪನ್ನಷ್ಟೆ ನೀಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಾಮ ತೀಡಿದ ಚೆಂಬು ಮತ್ತು ಚಿಪ್ಪನ್ನು ಪ್ರದರ್ಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿರುವ 50.65 ಲಕ್ಷ ಕೋಟಿಯ ಬಜೆಟ್‍ನಲ್ಲಿ ಶೇ.32 ರಷ್ಟು ಅಂದರೆ 16 ಲಕ್ಷ ಕೋಟಿ ರೂ.ಗಳ ಸಾಲದ ಪ್ರಸ್ತಾವಿದ್ದರೆ, ಸಾಲದ ಮೇಲನ ಬಡ್ಡಿಯ ಮೊತ್ತವೆ 12.7 ಲಕ್ಷ ಕೋಟಿ, ಅಂದರೆ ಶೇ.26 ರಷ್ಟಾಗುತ್ತದೆ. ಒಟ್ಟಾರೆಯಾಗಿ ಒಟ್ಟು ಬಡ್ಜೆಟ್‍ನ ಶೇ.58 ಭಾಗ ಸಾಲ ಮತ್ತು ಬಡ್ಡಿಗೆ ಮೀಸಲಿಡಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರಾಷ್ಟ್ರವನ್ನು ‘ಸಾಲದ ಕೂಪ’ಕ್ಕೆ ತಳ್ಳುತ್ತಿರುವುದಾಗಿ ಆರೋಪಿಸಿದರು. ಸ್ವಾತಂತ್ರ್ಯಾನಂತರದಿಂದ 2014ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎಲ್ಲಾ ಪಕ್ಷಗಳು ಮಾಡಿರುವ ಸಾಲದ ಮೊತ್ತ 53 ಲಕ್ಷ ಕೋಟಿ. ವಿಶ್ವಗುರು ಪ್ರಧಾನಿಯಾದ ಬಳಿಕ ಕಳೆದ ಹತ್ತೂವರೆ ವರ್ಷಗಳಲ್ಲಿ ಮಾಡಿರುವ ಸಾಲ 205 ಲಕ್ಷ ಕೋಟಿ ರೂ.ಗಳೆಂದು ಅಂಕಿ ಅಂಶಗಳನ್ನು ತೆರೆದಿಟ್ಟ ಎಂ.ಲಕ್ಷ್ಮಣ್, ಕೇಂದ್ರ ಸರ್ಕಾರ ಮಾಡಿರುವ ಸಾಲದಿಂದ ಪ್ರಸ್ತುತ ಪ್ರತಿ ಭಾರತೀಯನ ಮೇಲೆ 3.15 ಲಕ್ಷ ಸಾಲದ ಹೊರೆ ಬಿದ್ದಂತಾಗಿದೆ. ಬಡ್ಜೆಟ್‍ನಲ್ಲಿ 12 ಲಕ್ಷ ರೂ.ಗಳಿಗೆ ಆದಾಯ ತೆರಿಗೆ ವಿನಾಯಯಿತಿ ನೀಡಿರುವುದನ್ನೆ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ನಿಜಕ್ಕಾದರೆ ಇದರ ಲಾಭ 147 ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೇವಲ 35 ಲಕ್ಷ ಮಂದಿಗಷ್ಟೆ ದೊರಕಬಹುದೆಂದು ಅಭಿಪ್ರಾಯಿಸಿ, ಈ ಬಾರಿ ಮಂಡಿಸಿರುವ ಬಡ್ಜೆಟ್ ಭಾರತದ ಬಡ್ಜೆಟ್ ಅಲ್ಲ ಬದಲಾಗಿ, ಮುಂದಿನ ಚುನಾವಣೆಯನ್ನು ಗುರಿಯಾಗಿಸಿಕೊಂಡ ಬಿಹಾರದ ಬಡ್ಜೆಟ್ ಎಂದರು. ರಾಷ್ಟ್ರದಲ್ಲೆ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನವನ್ನು ಕರ್ನಾಟಕ ಹೊಂದಿದೆ. ಕರ್ನಾಟಕ ವಾರ್ಷಿಕ 4.95 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ನೀಡುತ್ತದೆ. ನ್ಯಾಯ ಬದ್ಧವಾಗಿ ಇದರಲ್ಲಿ ಶೇ.42 ರಷ್ಟನ್ನು ರಾಜ್ಯಕ್ಕೆ ಮರಳಿಸಬೇಕು. ಆದರೆ, ಇದನ್ನು ನೀಡುತ್ತಿಲ್ಲ. ಪ್ರಸ್ತುತ ವಾರ್ಷಿಕ 2 ಲಕ್ಷ ತೆರಿಗೆ ಪಾವತಿಸುವ ಬಿಹಾರಕ್ಕೆ 78 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿದ್ದರೆ, ರಾಜ್ಯಕ್ಕೆ ಕೊಟ್ಟಿರುವುದು ಬರೇ ಮೂರು ನಾಮ ತೀಡಿದ ಚಿಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದ ಬಡ್ಜೆಟ್ ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸುವ ಬಡ್ಜೆಟ್ ಅಷ್ಟೇ ಆಗಿದೆ. ಕಳೆದ ಸಾಲಿನ ಬಡ್ಜೆಟ್‍ನಲ್ಲಿ ಪ್ರಸ್ತಾಪಿಸಿದ ಅಪ್ಪರ್ ಕೃಷ್ಣ ಯೋಜನೆಗೆ 5300 ಕೋಟಿ ಘೋಷಿಸಲಾಗಿದ್ದರು ಹಣ ಬಂದಿಲ್ಲ. ಮೇಕೆದಾಟು, ಕಳಸ ಬಂಡೂರಿ, ರಾಯಚೂರಿಗೆ ಏಮ್ಸ್ ಕೇಂದ್ರ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ನೆರವು ಯಾವುದನ್ನು ಕೇಂದ್ರ ನೀಡಿಲ್ಲವೆಂದು ಟೀಕಿಸಿ, ಇದು ನರೇಂದ್ರ ಮೋದಿ ಅವರ ಸಬ್ ಕಾ ಸಾತ್…ಸಬ್ ಕಾ ವಿಕಾಸ್’ ಎಂದು ವ್ಯಂಗ್ಯವಾಡಿದರು. ಕೊಡಗಿಗೆ ರೈಲ್ವೆ ಸಂಪರ್ಕಕ್ಕೆ 1854 ಕೋಟಿ ಎಂದು ಹಿಂದೆ ಘೋಷಿಸಲಾಗಿದ್ದರು, ಒಂದು ಪೈಸೆಯನ್ನು ಕೇಂದ್ರ ಒದಗಿಸಿಲ್ಲ. ರೈಲ್ವೆಗೆ ಸಂಬಂಧಿಸಿದ ಸರ್ವೇ ನಡೆದಿದೆ ಎನ್ನಲಾಗುತ್ತದೆಯಾದರು, ಅದಕ್ಕೂ ಪುರಾವೆಗಳಿಲ್ಲ, ಮಡಿಕೇರಿಯಲ್ಲಿ ಏರ್ ಸ್ಟ್ರೈಪ್ ಮಾಡುತ್ತೇವೆ ಎನ್ನುವ ವಿಚಾರಗಳುಗು ಇಂದು ಬೆಲೆ ಇಲ್ಲದಾಗಿದೆ. ಈ ಕ್ಷೇತ್ರದ ಸಂಸದರು ಸ್ಥಳೀಯ ಮುಖಂಡರನ್ನು ಕಾಫಿ ಸಮಸ್ಯೆ ಬಗೆಹರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿದ್ದಾರಾದರು, ಸಮಸ್ಯೆಗೆ ಪರಿಹಾರ ಬಡ್ಜೆಟ್‍ನಲ್ಲಿ ಮೂಡಿ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿದೇಶಿ ಬಡವಾಳ ಕುಸಿಯುತ್ತಿದೆ, ಅಗತ್ಯ ಸಾಮಾಗ್ರಿಗಳ ಬೆಲೆ ನಿಯಂತ್ರಣ ತಪ್ಪಿದೆ, ಉದ್ಯೋಗವೆನ್ನುವುದು ಮರೀಚಿಕೆಯಾಗಿದೆ. ಒಟ್ಟಾರೆಯಾಗಿ ಕೇಂದ್ರದ ಇಂಜಿನ್ ಹಳಿ ತಪ್ಪಿದೆಯೆಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ವಕ್ತಾರ ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ಕಕ್ಕಬ್ಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಉಪಸ್ಥಿತರಿದ್ದರು.









