
ಮಡಿಕೇರಿ ಫೆ.4 NEWS DESK : ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಂಘಟನೆಗಳ ಸಹಯೋಗದಲ್ಲಿ ಕೊಡವ ಭಾಷಿಕ ಸಮುದಾಯಗಳು ಕುಟ್ಟಾದಿಂದ ಮಡಿಕೇರಿಯವರೆಗೆ ಕೈಗೊಂಡ “ಕೊಡವಾಮೆ ಬಾಳೋ” ಪಾದಯಾತ್ರೆಯ ಎರಡನೇ ದಿನ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಪೊನ್ನಂಪೇಟೆ ಕೊಡವ ಸಮಾಜ ತಳಿಯತಕ್ಕಿ ಬೊಳಕ್ ಹಾಗೂ ದುಡಿ ಕೊಟ್ಟ್ ಪಾಟ್’ನೊಂದಿಗೆ ಸ್ವಾಗತಿಸುವ ಮೂಲಕ ಎರಡನೇ ದಿನದ ಪಾದಯಾತ್ರೆ ಸಂಪನ್ನಗೊಂಡಿತು. ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಮಾಜಿ ಸೈನಿಕರು ನಿರ್ಮಿಸಿದ ಅಮರ್ ಜವಾನ್ ಪುತ್ಥಳಿಗೆ ಸ್ಥಳಿಯ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಮಾಲಾರ್ಪಣೆ ಮಾಡಿದ ನಂತರ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಪ್ರಾರ್ಥನೆ ಸಲ್ಲಿಸಿ ನೆಲ್ಲಕ್ಕಿಗೆ ಅಕ್ಕಿ ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ತಳಿಯಕ್ಕಿ ಬೊಳಕ್’ನೊಂದಿಗೆ ಶಿಸ್ತುಬದ್ಧವಾಗಿ ಹೊರಟ ಪಾದಯಾತ್ರೆ ನಂತರ ಒಂಟಿಯಂಗಡಿಯ ಇತಿಹಾಸ ಪ್ರಸಿದ್ಧದ ಪೆರುಮಾಳ್ ಪಟ್ಟಿ ದೇವನೆಲೆಯಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಶುಭಕೋರಲಾಯಿತು. ಸಂಭ್ರಮ ಮಹಿಳಾ ಸಂಘ ಸೇರಿದಂತೆ ಮಚ್ಚಮಾಡ ಕುಟುಂಬ, ತುಪ್ಪನಾಣಿ ಭಗವತಿ ದೇವಸ್ಥಾನ, ಹೈಸೊಡ್ಲೂರ್ ಗ್ರಾಮಸ್ಥರು, ಸ್ವಾಗತಿಸಿ ತಂಪು ಪಾನಿಯ, ಲಘು ಫಲಾಹಾರ ನೀಡಿದರೆ, ಹುದಿಕೇರಿ ಮತ್ತು ಕೋಣಂಗೇರಿ ಗ್ರಾಮಸ್ಥರು ಸ್ವಾಗತಿಸಿ ಅಲ್ಲಿನ ಕೊಡವ ಸಮಾಜದಲ್ಲಿ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು. ಹುದಿಕೇರಿ 7ನೇ ಮೈಲ್’ನಲ್ಲಿ ತೀತೀರ ಕುಟುಂಬ ಎಲ್ಲಾರಿಗೂ ಐಸ್ ಕ್ರೀಮ್ ನೀಡುವ ಮೂಲಕ ಬಿಸಿಲ ಬೇಗೆಯಿಂದ ತತ್ತರಿಸಿದ ಮಂದಿಗೆ ತಂಪು ನೀಡಿದರು. ಬೇಗೂರ್ ಕೊಲ್ಲಿಯ ನಂತರ ನಡಿಕೇರಿಯಲ್ಲಿ ಗ್ರಾಮಸ್ಥರು ಸ್ವಾಗತಿಸುವ ಮೂಲಕ ಸಿಹಿ ನೀಡಿದರೆ, ಬೇಗೂರುವಿನ ಪೂಳೇಮಾಡ್ ಈಶ್ವರ ದೇವಸ್ಥಾನ ದ್ವಾರದಲ್ಲಿ ಬೇಗೂರು ಗ್ರಾಮಸ್ಥರು ಬರಮಾಡಿಕೊಂಡು ತಂಪು ಪಾನೀಯ ಹಾಗೂ ಸಿಹಿ ನೀಗಿದರು. ಬಳಿಕ ಮಾಪಳೆ ತೋಡಿಗೆ ಆಗಮಿಸುತ್ತಿದ್ದಂತೆ ಕೊಡವ ಮುಸ್ಲಿಮ್ ಜನಾಂಗ ಹಾಗೂ ಆಲೀರ ಕುಟುಂಬ ಅದ್ದೂರಿಯ ಸ್ವಾಗತದೊಂದಿಗೆ ತಂಪು ಪಾನೀಯ, ಕಾಫಿ ಟೀ ಸೇರಿದಂತೆ ಬಿಸ್ಕೇಟ್ ಹಾಗೂ ಸಿಹಿ ತಿನಿಸುಗಳನ್ನು ನೀಡುವ ಮೂಲಕ ಕೊಡವ ಜನಾಂಗ ಹಿರಿಯಣ್ಣ ಎಂಬ ಸಂದೇಶವನ್ನು ಸಾರಿದರು. ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆ ಹಾಗೂ ಸಮಾಜಗಳ ಅದ್ದೂರಿಯ ಸ್ವಾಗತದೊಂದಿಗೆ ನಡೆದ ಎರಡನೇ ದಿನದ ಪಾದಯಾತ್ರೆಯನ್ನು ಪೊನ್ನಂಪೇಟೆ ಕೊಡವ ಸಮಾಜ ಅದ್ದೂರಿಯ ಸ್ವಾಗತ ನೀಡುವ ಮೂಲಕ ಕೊನೆಗೊಂಡಿತು. ಮಂಗಳವಾರದ ಪಾದಯಾತ್ರೆ ಸರಿಯಾಗಿ ಬೆಳಿಗ್ಗೆ 09-30ಕ್ಕೆ ಪೊನ್ನಂಪೇಟೆ ಕೊಡವ ಸಮಾಜದಿಂದ ಪ್ರಾರಂಭಗೊಂಡು ಗೋಣಿಕೊಪ್ಪ ಮೂಲಕ ಹಾದು ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಕೊನೆಗೊಳ್ಳಲಿದೆ.









