
ಮಡಿಕೇರಿ ಫೆ.4 NEWS DESK : ಕ್ಷೇತ್ರದ ಅಭಿವೃದ್ಧಿ ಕಾಮಗಾರಿಯಲ್ಲಿ ಒಂದಿಂಚು ಕೂಡ ಕಳಪೆಯಾದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬಳದಾಳು, ಹೊದವಾಡ, ಪಾಲೆಮಾಡು, ಹೊದ್ದೂರು, ಕಬಡಗಕೇರಿ ಗ್ರಾಮಗಳಲ್ಲಿ ಒಟ್ಟು 1 ಕೋಟಿ 36 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅನುದಾನ ತರುವುದರ ಜೊತೆಗೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಬದ್ದನಿದ್ದೇನೆ. ಹಾಗಾಗಿ ಯಾವುದೇ ಕಾಮಗಾರಿಯಲ್ಲಿ ಸ್ವಲ್ಪವೂ ಕೂಡ ಲೋಪವಾಗಬಾರದು ಎಂದು ಎಂಜಿನಿಯರ್ ಗಳಿಗೆ ಎಚ್ಚರಿಕೆ ನೀಡಿದರು. ಅಭಿವೃದ್ಧಿ ವಿಚಾರದಲ್ಲಿ ತಾವು ಯಾವುದೇ ರೀತಿಯ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಡಾ.ಮಂತರ್ ಗೌಡ ಗ್ರಾಮಸ್ಥರು ಒಮ್ಮತದಿಂದ ಮತ್ತಷ್ಟು ಅವಶ್ಯಕ ಕಾಮಗಾರಿ ಪಟ್ಟಿ ನೀಡಿದರೆ ಅದನ್ನು ಕೂಡ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ದೆಹಲಿಯಲ್ಲಿ ನಡೆದ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್.ಎ.ಹಂಸ ಅವರನ್ನು ಗ್ರಾಮಸ್ಥರ ಪರವಾಗಿ ಮಂತರ್ ಗೌಡ ಅಭಿನಂದಿಸಿದರು. ಹೆಚ್.ಎ.ಹಂಸ ಮಾತನಾಡಿ ಡಾ.ಮಂತರ್ ಗೌಡ ಸರ್ಕಾರದ ಮಟ್ಟದಲ್ಲಿ ಉನ್ನತ ಪ್ರಭಾವ ಹೊಂದಿದ್ದು, ಎಲ್ಲಾ ಇಲಾಖೆಗಳಿಂದ ಅನುದಾನ ತರುವ ಸಾಮರ್ಥ್ಯ ಹೊಂದಿದ್ದಾರೆ. ಕ್ಷೇತ್ರದ ಜನತೆ ಪಕ್ಷಭೇದ ಮರೆತು ಡಾ.ಮಂತರ್ ಅವರ ಸಾಮರ್ಥ್ಯ ದ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಇಬ್ರಾಹಿಂ, ಕೇಶವ, ಗ್ರಾ.ಪಂ ಸದಸ್ಯ ಮೊಣ್ಣಪ್ಪ, ಹಮೀದ್, ಕುಸುಮಾವತಿ, ಲಕ್ಷ್ಮೀ, ಮೊಯ್ದು, ಅನಿತಾ, ಚೌರಿರ ಅನಿತಾ, ಕಡ್ಲೆರ ಟೈನಿ, ಮುಖಂಡರಾದ ವಿ.ಜಿ.ಮೋಹನ್, ಹರಿಪ್ರಸಾದ್, ಕವನ್ ಕೊತ್ತೋಳಿ, ಶರಣ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಪಂಚಾಯತ್ ರಾಜ್ ಇಂಜಿನಿಯರ್ ರಘು, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.









