
ಮಡಿಕೇರಿ ಫೆ.4 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.17 ರಿಂದ ಮೇ 4ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್” ಲೆದರ್ ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಜನಾಂಗದ ಯುವ ಪೀಳಿಗೆ ಲೆದರ್ ಬಾಲ್ ಕ್ರಿಕೆಟ್ ಅನ್ನು ವೃತ್ತಿಪರವಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ ಎಂದರು. 2025ರ ಸೀಸನ್-03 ರಲ್ಲಿ ಒಟ್ಟು 10 ರಿಂದ 12 ಫ್ರಾಂಚೈಸಿಗಳು ಭಾಗವಹಿಸುತ್ತಿದ್ದು, ಈ ಬಾರಿ ಕೊಡಗು ಮತ್ತು ದಕ್ಷಿಣ ಕನ್ನಡ ಮೂಲದ ಎಲ್ಲಾ ಒಕ್ಕಲಿಗ ಗೌಡ ಜನಾಂಗದವರಿಗೆ ಆಡಲು ಅವಕಾಶ ಕಲ್ಪಿಸಲಾಗುತ್ತಿದೆ. ಒಕ್ಕಲಿಗ ಗೌಡರಲ್ಲಿ ಹಲವು ಉಪಜಾತಿಗಳು ಇದ್ದು, ಕೊಡಗು ಮತ್ತು ದ.ಕ ಜಿಲ್ಲೆಯ ಒಕ್ಕಲಿಗ ಗೌಡರಿಗೆ ಫ್ರಾಂಚೈಸಿ ಹಾಗೂ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ ಸರಕಾರದಿಂದ ಸಾಕಷ್ಟು ಅನುದಾನ ದೊರಕಿದ್ದಲ್ಲಿ ಮುಂದೆ ಎಲ್ಲಾ ಜಿಲ್ಲೆಗಳ ಒಕ್ಕಲಿಗರನ್ನು ಒಳಗೊಳ್ಳುವ ಚಿಂತನೆಗಳಿವೆ ಎಂದರು. ಈ ಬಾರಿಯ ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ನಗದು ಮತ್ತು ಕಳೆದ ಸೀಸನ್‍ನಲ್ಲಿ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದ ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾದ ಟ್ರೋಫಿಯನ್ನು ನೀಡಲಾಗುತ್ತದೆ ಹಾಗೂ ಹಲವಾರು ಬಹುಮಾನಗಳು ಮತ್ತು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು. ಕಳೆದ ಎರಡು ವರ್ಷದ ಲೆದರ್ ಬಾಲ್ ಕ್ರೀಡಾಕೂಟಕ್ಕಿಂತ ಈ ಬಾರಿ ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದ್ದು, ಪಂದ್ಯಾವಳಿಯ ನೇರ ಪ್ರಸಾರ ಇರುತ್ತದೆ ಮತ್ತು ಕ್ರೀಡಾಕೂಟದಲ್ಲಿ ಇನ್ನೂ ಹಲವಾರು ಕ್ರೀಡೆ ಹಾಗೂ ಜನಾಂಗದ ಸಂಸ್ಕೃತಿ ಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ಪೀಳಿಗೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದೆ ಎಂದು ರಿಶಿತ್ ಮಾದಯ್ಯ ಹೇಳಿದರು. ಒಕ್ಕಲಿಗ ಜನಾಂಗದ ಕ್ರೀಡಾಕೂಟಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಲು ಮಡಿಕೇರಿ ಮತ್ತು ವಿರಾಜಪೇಟೆ ಶಾಸಕರು ಸಹಕರಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಈಗಾಗಲೇ ಲೆದರ್ ಬಾಲ್ ಕ್ರೀಡಾ ಕೂಟದಲ್ಲಿ 12 ವರ್ಷದ ಮೇಲಿನ ಯುವಕ, ಯುವತಿಯರು ಹಾಗೂ ಪುರುಷ ಮತ್ತು ಮಹಿಳ ಆಟಗಾರರಿಗೆ ಆನ್‍ಲೈನ್ ಅಫ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಆಟಗಾರರು ಅಪ್ಲಿಕೇಶನ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಒದಗಿಸಬೇಕು. ಹೊಸ ಫ್ರಾಂಚೈಸಿ ಖರೀದಿಸಲು ಪ್ಲೇಯರ್ ಅಪ್ಲಿಕೇಶನ್ ಹಾಗೂ ಕ್ರೀಡಾಕೂಟದ ಸಂಪೂರ್ಣ ವಿವರಗಳಿಗೆ 9972376151, 9980004374, 7019671130 ಸಂಪರ್ಕಿಸುವಂತೆ ರಿಶಿತ್ ಮಾದಯ್ಯ ಮಾಹಿತಿ ನೀಡಿದರು. 2023ರಲ್ಲಿ ಮೊದಲ ಬಾರಿಗೆ ಜನಾಂಗದ ಯುವ ಪೀಳಿಗೆಗೆ ಎಂಟರ್‍ಟೈನ್‍ಮೆಂಟ್ ಕ್ರಿಕೆಟ್‍ನಿಂದ ಪ್ರೊಫೆಶನಲ್ ಕ್ರಿಕೆಟ್‍ಗೆ ಉತ್ತೇಜನ ನೀಡುವ ಸಲುವಾಗಿ ಲೆದರ್‍ಬಾಲ್ ಕ್ರಿಕೆಟನ್ನು ಪರಿಚಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಮೂಡಿಬರುತ್ತಿರುವ ಕ್ರೀಡಾಕೂಟ ಈಗಾಗಲೇ ಜನಮನ ಗೆದ್ದಿದೆ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಲೆದರ್‍ಬಾಲ್ ಕ್ರಿಕೆಟ್ ಈಗ ಹಲವಾರು ಗ್ರಾಮಗಳಲ್ಲಿ ಬೇಸಿಕ್ ಸೌಲಭ್ಯಗಳನ್ನು ಒದಗಿಸಿಕೊಂಡು ಯುವ ಪೀಳಿಗೆಗೆ ಪೋತ್ಸಾಹ ನೀಡಲಾಗುತ್ತಿದೆ. ಇದರಿಂದ ಮುಂದೆ ವೃತ್ತಿಪರ ಕ್ರಿಕೆಟ್‍ನಲ್ಲಿ ಉತ್ತಮ ಪ್ರತಿಭೆಗಳು ರೂಪುಗೊಳ್ಳಲು ಯುವ ವೇದಿಕೆ ಕಾರಣವಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಹ ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ನಿರ್ದೇಶಕ ಕೊಂಬಾರನ ರಂಜು, ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್ ತಿಮ್ಮಯ್ಯ, ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ಉಪಸ್ಥಿತರಿದ್ದರು.









