
ಮಡಿಕೇರಿ ಫೆ.8 NEWS DESK : ಮಡಿಕೇರಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮಿತಿ ನಿಯಮಾನುಸಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ಸಮಿತಿಯ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ.47/1974-75 52ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಧಿಕೃತ ಸಂಘಟನೆಯಾಗಿದೆ. ಈ ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕಿಯಾಗಿ ನಾನು ಆಯ್ಕೆಯಾದಾಗಿನಿಂದ ಪ್ರತಿ ತಿಂಗಳು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉಚಿತವಾಗಿ ಸಭೆ ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ ಎಂದರು. ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯ ನೇತೃತ್ವ ವಹಿಸಿರುವ ಹೆಚ್.ಎಂ.ನಂದಕುಮಾರ್ ಹಾಗೂ ಸಮಿತಿ ಸದಸ್ಯರು ನಿಯಮಾನುಸಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹೆಚ್.ಎಲ್.ದಿವಾಕರ್ ಅವರು ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ದುರುದ್ದೇಶಪೂರಿತವಾಗಿ ಪ್ರತಿಭಟನೆಗಳಿಗೆ ಕರೆ ನೀಡುವುದು ಸರಿಯಲ್ಲ. ಅಗತ್ಯವಿದ್ದಲ್ಲಿ ಕಾನೂನು ಹೋರಾಟದ ಮೂಲಕ ಸರಿಪಡಿಸಿಕೊಳ್ಳಲಿ ಎಂದರು. ದಲಿತ ಪರವಾದ, ದಲಿತರಿಗೆ ಅನುಕೂಲವಾಗುವಂತಹ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಬೇಕೆ ಹೊರತು ಬಹಿರಂಗವಾಗಿ ಆರೋಪಗಳನ್ನು ಮಾಡುತ್ತಾ ಸಮುದಾಯಕ್ಕೆ ಮುಜುಗರವನ್ನುಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು. ತಮ್ಮ ಸ್ವಾರ್ಥಕ್ಕಾಗಿ ಡಾ.ಅಂಬೇಡ್ಕರ್ ಭವನ ಸಮಿತಿಯ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ. ಸುಳ್ಳು ವದಂತಿಗಳನ್ನು ಹಬ್ಬಿಸಿ ಹಾದಿ ತಪ್ಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಗಾಯತ್ರಿ ನರಸಿಂಹ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಬಾವ ಮಾಲ್ದಾರೆ, ಪಿ.ಬೋಜ ಹಾಗೂ ಮಡಿಕೇರಿ ತಾಲ್ಲೂಕು ಸಂಚಾಲಕಿ ಹೆಚ್.ಹೆಚ್.ಗೌರಮ್ಮ ಉಪಸ್ಥಿತರಿದ್ದರು.









