
ಮೈಸೂರು NEWS DESK ಫೆ.9 : ಪ್ರಾಚೀನ ಕಲೆಯಾದ “ಯೋಗಕ್ಕೆ” ನಮ್ಮ ಮೈಸೂರು ಮಹಾರಾಜರು ಹೆಚ್ಚು ಆದ್ಯತೆ ನೀಡಿ, ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಮೈಸೂರು ಯೋಗದ ರಾಜಧಾನಿ ಎಂಬಂತಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯನ್ನು “ಯೋಗ ಮ್ಯೂಸಿಯಂ” ಆಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು ಯೋಗ ಅಸೋಸಿಯೇಷನ್ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಯದುವೀರ್, ಮೈಸೂರು ಜಿಲ್ಲಾ ಯೋಗ ಅಸೋಸಿಯೇಷನ್ ಪ್ರತಿನಿಧಿಗಳು ನನ್ನನ್ನು ಭೇಟಿಯಾಗಿ ಯೋಗ ಸಂಬಂಧಿತ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾನಿಲಯ ಸ್ಥಾಪನೆ, ಮೈಸೂರಿನ ಹಿರಿಯ ಯೋಗಾಚಾರ್ಯರಾದ ಕೃಷ್ಣಮಾಚಾರ್ಯ ಪುತ್ಥಳಿ ಸ್ಥಾಪನೆ, ಮೈಸೂರಿನ ಹಿರಿಯ ಯೋಗಾಚಾರ್ಯ ಪಟ್ಟಾಭಿ ಜೋಯಿಸರ ಪುತ್ಥಳಿ ಇಲ್ಲವೇ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡುವುದು, ಶಾಲೆಗಳಲ್ಲಿ ಕಡ್ಡಾಯವಾಗಿ ಯೋಗ ಶಿಕ್ಷಣ ಅಳವಡಿಕೆ, ಆರ್ಥಿಕವಾಗಿ ಹಿಂದುಳಿದ ಯೋಗ ಶಿಕ್ಷಕರಿಗೆ ಮಾಸಾಶನ ಹಾಗೂ ಯೋಗ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ನಿವೇಶನ ರಹಿತ ಯೋಗ ಶಿಕ್ಷಕರಿಗೆ ನಿವೇಶನ ನೀಡುವುದು ಹಾಗೂ ಮೈಸೂರು ಯೋಗ ಪರಂಪರೆಯ ಕೃತಿ ಪ್ರಕಟಣೆ ಮಾಡಬೇಕು ಎಂಬ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದೇನೆ ಎಂದು ಯದುವೀರ್ ತಿಳಿಸಿದ್ದಾರೆ. *ಮೈಸೂರು ಯೋಗ ಪರಂಪರೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕ್ರಮ* ಮೈಸೂರು ಯೋಗ ರಾಜಧಾನಿಯಾಗಿದ್ದು, ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕ್ಷೇತ್ರ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಯೋಗ ಅಸೋಸಿಯೇಷನ್ ಪ್ರತಿನಿಧಿಗಳು ನೀಡಿರುವ ಸಲಹೆ-ಅಭಿಪ್ರಾಯಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.









