ಮಡಿಕೇರಿ NEWS DESK ಫೆ.9 : ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸೂಚನೆ ನೀಡಿದ್ದಾರೆ. ಶಾಸಕರು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಲಭಿಸಬೇಕು, ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಚಿಕಿತ್ಸೆಗಾಗಿ ಬಂದ ಸಾರ್ವಜನಿಕರ ಆರೋಗ್ಯ ವಿಚಾರಿಸಿದ ಶಾಸಕರು, ವೈದ್ಯ ಡಾ.ಜಮೀರ್ ಅಹಮ್ಮದ್ ಅವರೊಂದಿಗೆ ಆಸ್ಪತ್ರೆಯ ಪ್ರತಿ ವಿಭಾಗಗಳಿಗೆ ತೆರಳಿ ಮಾಹಿತಿ ಪಡೆದರು. ಒಳರೋಗಿಗಳ ಬಳಿಗೆ ಹೋದ ಅವರು ಚಿಕಿತ್ಸೆಯ ಕುರಿತು ವಿಚಾರಿಸಿದರು. ಸೋಮವಾರಪೇಟೆ ಪ.ಪಂ ನಾಮ ನಿರ್ದೇಶಿತ ಸದಸ್ಯ ಡಿ.ಯು.ಕಿರಣ್ ಮತ್ತಿತರರು ಹಾಜರಿದ್ದರು.









