
ನಾಪೋಕ್ಲು ಫೆ.10 NEWS DESK : ಸಂಯುಕ್ತ ಅರಬ್ ಸಂಸ್ಥಾನದ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೊಡಗಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೊಡಗಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೊದ್ದೂರು ಗ್ರಾ.ಪಂಯ ಹೊದವಾಡ ಗ್ರಾಮದ ರಾಫಲ್ಸ್ ಇಂಟನ್ರ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡಂಡ ಕುಂಜಿಲ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ, ಪಾರಿತೋಷಕ ಮತ್ತು ನಗದು ನೀಡಿ ಗೌರವಿಸಿದರು. ಅಲ್ಲದೇ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಂಸನಾ ಪತ್ರ ಹಸ್ತಾಂತರಿಸಿದರು. ಕಾರ್ಯಕ್ರಮಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕುಂಜಿಲ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯರಾದ ಗಂಗಮ್ಮ, ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯರಾದ ಕಲಿಯಾಟಂಡ ಶಾರದಾ, ರಾಫಲ್ಸ್ ಕಾಜೇಜು ಪ್ರಾಂಶುಪಾಲರಾದ ತನ್ವೀರ್, ಬಲ್ಲಮಾವಟಿ ಶಾಲೆಯ ಅಧ್ಯಾಪಕರಾದ ಮೆಹಬೂಬ್ ಮಾಸ್ಟರ್, ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಕಾರ್ಯದರ್ಶಿಯಾದ ಬಷೀರ್ ಎಡಪಲ, ಮರ್ಕಜ್ ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮತ್ತು ಆಕ್ಸ್ಫರ್ಡ್ ಶಾಲೆಯ ಮಾಲೀಕರಾದ ಶಾಹಿದ್ ಕೊಟ್ಟಮುಡಿ ಶಿಕ್ಷಕ ವೃಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅವರು ಉಪಸ್ಥಿತರಿದ್ದರು.
ವರಿದಿ : ದುಗ್ಗಳ ಸದಾನಂದ.









