
ನಾಪೋಕ್ಲು ಫೆ.10 NEWS DESK : ಮೂರ್ನಾಡು ಆಪ್ತಮಿತ್ರ ಬಳಗದ ವತಿಯಿಂದ ಮೂರ್ನಾಡಿನಲ್ಲಿ ಎರಡನೇ ವರ್ಷದ “ಸಾಕೇತ ಸಾಮ್ರಾಜ್ಞೆ” ಯಕ್ಷೋತ್ಸವ ಗಮನ ಸೆಳೆಯಿತು. ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ನಡೆದ ಯಕ್ಷೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ `ಗಜಮೇಳ” ಎಂದೇ ಪ್ರಖ್ಯಾತಿ ಪಡೆದ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಖ್ಯಾತ ಕಲಾವಿದರು “ಸಾಕೇತ ಸಾಮ್ರಾಜ್ಞೆ” ಎಂಬ ಯಕ್ಷ ಪ್ರಸಂಗವನ್ನು ನಡೆಸಿಕೊಟ್ಟರು. ನಾಪೋಕ್ಲು-ಮೂರ್ನಾಡು ಸೇರಿದಂತೆ ವಿವಿಧ ಭಾಗಗಗಳಿಂದ ಬಂದಿದ್ದ ಸಾವಿರಾರು ಪ್ರೇಕ್ಷಕರಿಗೆ ಸಂಜೆ ಕಾಫಿ, ಲಘು ಉಪಾಹಾರ ಮತ್ತು ರಾತ್ರಿ ವೇಳೆ ಊಟ ಹಾಗೂ ಕಾಫಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನುರಿತ ಕಲಾವಿದರ ವೇಷ-ಭೂಷಣಗಳು, ಭಾಗವತಿಕೆ, ನೃತ್ಯ, ತಾಳ- ಮೇಳ ಹಾಗೂ ಮಾತುಗಾರಿಕೆಗೆ ಮಾರು ಹೋದ ಪ್ರೇಕ್ಷಕರು, ಚಪ್ಪಾಳೆ, ವಿಷಲ್‍ಗಳ ಸರಿಮಳೆಯೊಂದಿಗೆ ಕಲಾವಿದರಿಗೆ ಹಾಗೂ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು. ಆಪ್ತಮಿತ್ರ ಬಳಗದ ಪರವಾಗಿ ವಿಜಯ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.
ಅಭಿಪ್ರಾಯ :: ಆಪ್ತಮಿತ್ರ ಬಳಗ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 6 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಬಳಗ ತುರ್ತು ಸಂದರ್ಭಗಳಲ್ಲಿ ವಾಟ್ಸಪ್ ಗ್ರೂಪ್ ನ ಸದಸ್ಯರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಅಗತ್ಯವಿದ್ದವರಿಗೆ ನೆರವು ನೀಡುತ್ತಿದ್ದೇವೆ. ಸಮಾಜ ಸೇವೆಯೊಂದಿಗೆ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಯಶಸ್ವಿಯಾಗಿದೆ. 3,000ಕ್ಕೂ ಅಧಿಕ ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿ ಯಶಸ್ವಿಗೊಳಿಸಿದ್ದಾರೆ. ಆಪ್ತಮಿತ್ರ ಬಳಗದ ಪ್ರತಿಯೊಬ್ಬ ಸದಸ್ಯರ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ :: ಮೂರ್ನಾಡು ಆಪ್ತಮಿತ್ರ ಬಳಗದ ಸಂಘಟಕ ಚಂದ್ರಶೇಖರ ಕುಲಾಲ್
ನಮ್ಮೊಂದಿಗೆ ಸಹಕರಿಸಿ ಪ್ರೋತ್ಸಾಹಿಸಿದ ಆಪ್ತಮಿತ್ರ ಬಳಗ ಹಾಗೂ ಕಲಾ ಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ನಮ್ಮಂಥ ಕಲಾವಿದರಿಗೆ ಇದೇ ರೀತಿಯ ಸಹಕಾರ ಸಿಗಲೆಂದು ಮನವಿ ಮಾಡುತ್ತೇನೆ. :: ಹರೀಶ್ ಭಟ್ ಬಲಂತಿಲ
ವರದಿ : ದುಗ್ಗಳ ಸದಾನಂದ










