
ಮಡಿಕೇರಿ ಫೆ.11 NEWS DESK : ಕತ್ತಲೆಯಲ್ಲೇ ದಿನ ದೂಡುತ್ತಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಲ್ಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ನಾಗರಹೊಳೆ ಮತ್ತು ಗದ್ದೆ ಹಾಡಿಯ ನಿವಾಸಿಗಳಿಗೆ ವಿದ್ಯುತ್ ಭಾಗ್ಯ ಸಿಕ್ಕಿದೆ. ಹಲವು ವರ್ಷಗಳಿಂದ ಹಾಡಿಗೆ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದ್ದು, ಅದರಂತೆ ತ್ವರಿತ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ತೋರಿದ ಕಾಳಜಿಗೆ ಹಾಡಿ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ವಿಶೇಷ ಕರ್ತವ್ಯ ಅಧಿಕಾರಿ ಬಿ.ಪಿ.ಮುತ್ತಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರಿರ ನವೀನ್ ಅವರಿಗೆ ನಾಗರಹೊಳೆ, ಗದ್ದೆ ಹಾಡಿ ನಿವಾಸಿಗಳು ಹಾಗೂ ಸಾರ್ವಜನಿಕರ ಪರವಾಗಿ, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಕಟ್ಟಿ ಕಾರ್ಯಪ್ಪ ಅಭಿನಂದನೆ ಸಲ್ಲಿಸಿದ್ದಾರೆ.









