
ವಿರಾಜಪೇಟೆ ಫೆ.12 NEWS DESK : ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕೋತ್ಸವ ಹಾಗೂ ಸಂತ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಹಿಂದಿನ ಮೂರು ದಿವಸಗಳಿಂದಲೇ ಧ್ವಜಾರೋಹಣ, ಬಲಿಪೂಜೆ, ಪ್ರಭೋದನೆ ಹಾಗೂ ನವೇನಾ ಪ್ರಾರ್ಥನೆ ಜರುಗಿತು. ನಂತರ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ಕೆ.ಆರ್.ಪೇಟೆಯ ಬಾಲ ಯೇಸು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಪೌಲೋಸ್ ಥಾಮಸ್ ಆಡಂಬರ ಗಾಯನ ಬಲಿಪೂಜೆ ನೆರವೇರಿಸಿದರು. ಈ ಸಂದರ್ಭ ಗಾಯನ ವೃಂದದವರಿಂದ ದೇವರ ಗಾಯನ ಹಾಗೂ ಪ್ರಾರ್ಥನೆ ಜರುಗಿತು. ದೀಪಾರಾಧನೆ, ಬೈಬಲ್ ವಾಚನ ನಡೆಸಲಾಯಿತು. ನಂತರ ಸಂತ ಅನ್ನಮ್ಮ ಹಾಗೂ ಸಂತ ಲೂರ್ದು ಮಾತೆಯ ಪ್ರತಿಮೆಗಳನ್ನು ವಿದ್ಯುತ್ ಹಾಗೂ ಹೂವು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ವಿರಾಜಪೇಟೆ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು. ಚರ್ಚ್ ಆವರಣದಿಂದ ಹೊರಟು ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಮೂಲಕವಾಗಿ ಮೆರವಣಿಗೆ ಸಾಗಿ ಪುನಃ ಚರ್ಚ್ ನಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು, ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆಯ ಉದ್ದಕ್ಕೂ ಜಪಸಾರ ಹಾಗೂ ದೇವರ ನಾಮಾವಳಿಯನ್ನು ಸ್ತುತಿಸಿದರು. ನಂತರ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ಪರಮ ಪ್ರಸಾದದ ಆಶೀರ್ವಾದದ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಭಕ್ತರು ಸಿಡಿಮದ್ದನ್ನು ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಧರ್ಮಗುರುಗಳು, ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೊಡಗು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಶಾಸಕ ಎ.ಎಸ್.ಪೊನ್ನಣ್ಣ ಭೇಟಿ :: ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಜನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥನೆಯನ್ನು ಮಾಡಿದರು.










