


ಮಡಿಕೇರಿ ಫೆ.19 NEWS DESK : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಳೆಯಡ ಕುಟುಂಬಸ್ಥರ ಮೆನೆಗೆ ತೆರಳುವ ಸಂಪರ್ಕ ರಸ್ತೆ ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಹಾಗೂ ಸಹಕರಿಸಿದ ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ ಬಾಳೆಯಡ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ನಾಪೋಕ್ಲು ಕೊಡವ ಸಮಾಜದ ಎದುರುಗಡೆ ಹಾದುಹೋಗುವ ರಸ್ತೆಯು ದಶಕಗಳಿಂದ ದುಸ್ಥಿತಿಯಲ್ಲಿದ್ದು ಸಂಚಾರಿಸಲು ದುಸ್ತರವಾಗಿತ್ತು. ಈ ರಸ್ತೆಯು ಬಾಳೆಯಡ ಕುಟುಂಬಸ್ಥರ ಮನೆಗೆ ಹೋಗುವ ಸಂಪರ್ಕ ರಸ್ತೆಯಾಗಿದ್ದು, ದಿನಕ್ಕೆ ನೂರಾರು ವಾಹನಗಳು ಓಡಾಡುವ ರಸ್ತೆಯ ಡಾಂಬರೀಕರಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದ ರೂ.5 ಲಕ್ಷದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದಾಗ, ತಕ್ಷಣವೇ ಕಾಮಗಾರಿಯನ್ನು ಕೈಗೊಳ್ಳಲು ನಿರ್ದೇಶಿಸಿದ್ದರು.
ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆ :: ಈ ಭಾಗದಲ್ಲಿದ್ದ ಮನೆಗಳಿಗೆ ಹಳೆಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು ದಿನನಿತ್ಯವೂ ಲೋ ವೋಲ್ಟೇಜ್ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ಕೂಡಲೇ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಇಲಾಖೆಗೆ ಸೂಚಿಸಿದ ಪರಿಣಾಮ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸಿ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದೆ.









