
ಮಡಿಕೇರಿ ಫೆ.20 NEWS DESK : ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇದರ ನಡುವೆಯೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಉದಯಗಿರಿಯಲ್ಲಿ ಗಲಭೆ ಸೃಷ್ಟಿಸಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ನಡೆಯುತ್ತಿದೆ. ಈ ಗಲಭೆಯನ್ನು ನೆಪಮಾಡಿಕೊಂಡು ಪ್ರತಾಪ್ ಸಿಂಹ ಅವರು ಇಡೀ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜದಲ್ಲಿ ಅಶಾಂತಿ ಮೂಡಿಸುವ ಕಿಡಿಗೇಡಿಗಳು ಎಲ್ಲಾ ಧರ್ಮದಲ್ಲೂ ಇದ್ದಾರೆ. ಸಂವಿಧಾನ ಮತ್ತು ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕಿಡಿಗೇಡಿಗಳ ಕೃತ್ಯವನ್ನು ನಾವು ಕೂಡ ಖಂಡಿಸುತ್ತೇವೆ. ಅಶಾಂತಿ ಮೂಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ಹಕ್ಕನ್ನು ನೀಡಿದೆ. ಆದರೆ ಗಲಭೆಯೊಂದನ್ನು ನೆಪಮಾಡಿಕೊಂಡು ಒಂದು ಸಮುದಾಯವನ್ನು ಗುರಿಯಾಗಿಸಿ ತೇಜೋವಧೆ ಮಾಡುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ದೇಶದಲ್ಲಿ ಜೀವಿಸುತ್ತಿರುವ ಮುಸಲ್ಮಾನರು ಸಂವಿಧಾನಕ್ಕೆ ಬದ್ಧರಾಗಿಯೆ ಎಲ್ಲರೊಂದಿಗೆ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಾಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯವಿದೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮತ್ತು ಎಲ್ಲಾ ಸಮುದಾಯಗಳ ಮತಗಳಿಂದ ಚುನಾಯಿಸಲ್ಪಟ್ಟಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಮುಸಲ್ಮಾನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸಿದರೆ ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲವೆಂದು ಕಲೀಲ್ ಬಾಷ ತಿಳಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಪ್ರತಾಪ್ ಸಿಂಹ ಅವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಧರ್ಮಾಧಾರಿತವಾಗಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಯಾವುದೇ ಸಮುದಾಯದ ನಾಯಕನಾಗಿರಲಿ, ಗುರುವಾಗಿರಲಿ ಅಥವಾ ವ್ಯಕ್ತಿಯಾಗಿರಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.









