


ಮಡಿಕೇರಿ ಫೆ.24 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ರೂ.24700 ಮೌಲ್ಯದ ಕ್ರೀಡಾ ಚಟುವಟಿಕೆಗಳ ಕಿಟ್ ವಿತರಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಈ ಹಿಂದಿನಿಂದಲೂ ಕ್ರೀಡೆಗಳಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದ್ದು, ದೇಶೀಯ ಕ್ರೀಡೆಗಳಲ್ಲೂ ಸಾಧನೆ ಮಾಡಿದ್ದಾರೆ. ಇದೆಲ್ಲವನ್ನು ಗುರುತಿಸಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ಕ್ರೀಡಾ ಉಪಕರಣಗಳನ್ನು ನೀಡಲಾಯಿತು. ಕ್ರೀಡಾ ಉಪಕರಣಗಳ ಕಿಟ್ ಪಡೆದುಕೊಂಡ ಕಾಲೇಜಿನ ಪ್ರಾಂಶುಪಾಲ ಫ್ರೊ. ಮೇಜರ್ ಬಿ.ರಾಘವ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘ ಕಾಲೇಜಿಗೆ ಬಹಳಷ್ಟು ಸಹಕಾರ ನೀಡುತ್ತಿದ್ದು, ಕಾಲೇಜಿನ ಕುಂದುಕೊರತೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಈ ಉಪಕರಣಗಳು ಕ್ರೀಡಾ ಸ್ಪರ್ಧೆಗಳಿಗೆ ಭಾಗವಹಿಸಲು ತರಬೇತಿಗೆ ನೆರವಾಗುತ್ತದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಕ್ರೀಡಾ ಸಾಮಗ್ರಿಗಳ ಕಿಟ್ ಅನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕಾಲೇಜಿನ ಕ್ರೀಡಾ ನಿರ್ದೇಶಕ ರಮೇಶ್, ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು ಹಾಜರಿದ್ದರು.









