
ಮಡಿಕೇರಿ ಫೆ.25 NEWS DESK : ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಗಿನ ಬರಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಅವರಿಗೆ ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್, ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೆ, ಕನ್ನಡಪರ ಚಿಂತಕ ಡಾ.ರಾಜಶೇಖರ್, ಪತ್ರಕರ್ತ ಡಾ.ಭೇರ್ಯ ರಾಮಕುಮಾರ್, ಮಹಾಕವಿ ಡಾ.ಲತಾ ರಾಜಶೇಖರ್, ಸಾಹಿತಿಗಳಾದ ಡಾ.ರೇವಣ್ಣ ಬಳ್ಳಾರಿ, ಡಾ.ಸೌಜನ್ಯ ಶರತ್, ನೂತನ ಕುಮಾರ್ ಬಿ.ಕೆ ಹಾಗೂ ರೈತಪರ ಚಿಂತಕ ಸರಗೂರು ನಟರಾಜು ಅವರುಗಳ ಸಮ್ಮುಖದಲ್ಲಿ ಈರಮಂಡ ಹರಿಣಿ ವಿಜಯ್ ಪ್ರಶಸ್ತಿ ಸ್ವೀಕರಿಸಿದರು. ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮತ್ತು ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಉದ್ಘಾಟಿಸಿದರು.









