
ಮಡಿಕೇರಿ ಫೆ.28 NEWS DESK : ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಿರುವ ಸರಕಾರದ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ದೈವ ಆರಾಧಕರು ಮತ್ತು ದೈವ ನರ್ತಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ದೈವ ಆರಾಧನೆಯು ಕರಾವಳಿ ಸೇರಿದಂತೆ ಕೊಡಗು ಜಿಲ್ಲೆಯಲ್ಲು ಅನೇಕ ವರ್ಷದಿಂದ ಬಹುಮುಖ್ಯ ನಂಬಿಕೆ ಮತ್ತು ಆರಾಧನೆ ಪದ್ದತಿಯಾಗಿದ್ದು, ದೈವ ಆರಾಧನೆಯನ್ನು ಶಾಲೆಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಿರುವ ಸರಕಾರದ ಕ್ರಮ ಖಂಡನೀಯ, ಸರಕಾರ ತಕ್ಷಣವೇ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಪ್ರಮುಖರಾದ ಹರೀಶ್ ಜಿ.ಆಚಾರ್ಯ, ಬಿ.ಎ.ಜನಾರ್ಧನ, ದಿನೇಶ್, ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದರು.









