
ಮಡಿಕೇರಿ ಮಾ.10 NEWS DESK : ಕೊಡಗು ವಿಶ್ವ ವಿದ್ಯಾನಿಲಯವನ್ನು ಉಳಿಸಬೇಕೆಂದು ಒತ್ತಾಯಿಸಿ ಕೊಡಗು ವಿವಿ ಹಿತರಕ್ಷಣಾ ಬಳಗ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಉಪ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ವಿವಿ ಕುರಿತು ಸಮಾಲೋಚನೆ ನಡೆಸಿದ ನಿಯೋಗ ಕೊಡಗಿನ ಏಕೈಕ ವಿಶ್ವವಿದ್ಯಾನಿಲಯವನ್ನು ಉಳಿಸುವಂತೆ ಕೋರಿ ಮನವಿ ಸಲ್ಲಿಸಿದರು. ನಂತರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ ಕೊಡಗು ವಿವಿಯನ್ನು ರದ್ದುಗೊಳಿಸದಂತೆ ಕೋರಿತು. ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಕೊಡಗು ವಿವಿಯನ್ನು ಉಳಿಸುವ ವಿಶ್ವಾಸವಿದೆ ಎಂದು ನಿಯೋಗ ತಿಳಿಸಿದೆ. ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ ಮತ್ತಿತರರು ಇದ್ದರು.








