
ಕುಶಾಲನಗರ NEWS DESK ಜೂ. 22 : ಸಿಕಲ್ ಸೆಲ್ ( ಕುಡುಗೋಲು ) ಅನುವಂಶೀಯ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಜೀವವನ್ನು ಉಳಿಸಬಹುದು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಎಂದು ಕುಶಾಲನಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಇಂದೂಧರ್ ಹೇಳಿದರು. ಕುಶಾಲನಗರ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ “ಪಿಎಂ ಜನ್ ಮನ್ ಕಾರ್ಯಕ್ರಮ: 2025 ರಡಿ ತಾಲ್ಲೂಕಿನ ನಂಜರಾಯಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ “ವಿಶ್ವ ಸಿಕಲ್ ಸೆಲ್(ಕುಡುಗೋಲು) ದಿನಾಚರಣೆ” ನಡೆಯಿತು. ಸಿಕಲ್ ಸೆಲ್ ಕಾಯಿಲೆ ಕುರಿತು ಆಯೋಜಿಸಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆದಿವಾಸಿ ಸಮುದಾಯದವರಲ್ಲಿ ಹೆಚ್ಚಾಗಿ ಕಂಡು ಬರುವ ಸಿಕಲ್ ಸೆಲ್ (ಕುಡುಗೋಲು) ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾಯಿಲೆಯ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು. ಸಿಕಲ್ ಸೆಲ್ ಕಾಯಿಲೆಯು ಆದಿವಾಸಿಗಳಲ್ಲಿ ಕಂಡು ಬರುವ ಅನುವಂಶೀಯ ಕಾಯಿಲೆ ಬಗ್ಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮಕ್ಕಳಿಗೆ ಹಾಗೂ ನೆರೆದಿದ್ದ ಬುಡಕಟ್ಟು ಜನಾಂಗದವರಿಗೂ ಸಿಕಲ್ ಸೆಲ್ ಕಾಯಿಲೆಯಿಂದ ಕಂಡುಬರುವ ರಕ್ತಹಿನತೆಯ ಬಗ್ಗೆ ಹಾಗೂ ಅದಕ್ಕೆ ದೊರಕುವ ಸೌಲಭ್ಯಗಳ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಸಿಕಲ್ ಸೆಲ್ ಸ್ಕೀನಿಂಗ್ ಮಾಡಲಾಯಿತು ಹಾಗೂ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿಶ್ವಜ್ಞಾ, ಜನಾರ್ಧನ್ ರಾವ್, ಕದಂ, ಪ್ರೇಮ್ ಹಾಗೂ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಾದ ಪ್ರಿಯಾ, ಪ್ರೇಮಾ, ಹರ್ಷಿತಾ, ರಾಕೇಶ್, ಐಟಿಡಿಪಿ ಯೋಜನೆಯ ಚಂದನ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.









