


ಮಡಿಕೇರಿ ಜೂ.23 NEWS DESK : ತನ್ನ ಕ್ಷೇತ್ರದ ಜನರ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯಕ್ಷಮತೆಗೆ ಪಶ್ಚಿಮ ಘಟ್ಟ ಮೂಲ ನಿವಾಸಿಗಳ ಸಂಘದ ಪ್ರಧಾನ ಸಂಚಾಲಕ ಕಾಳಚಂಡ ರವಿ ತಮ್ಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ಮಡಿಕೇರಿಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಮಡಿಕೇರಿ ಕ್ಷೇತ್ರದಶಾಸಕರಾದ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿದ ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರವಿ ತಮ್ಮಯ್ಯ ತಮ್ಮ ಗ್ರಾಮದ ಮೂಲಭೂತ ಸೌಕರ್ಯ ಕೊರತೆಯನ್ನು ನಿವಾರಿಸುವಂತೆ ವಿನಂತಿಸಿಕೊಂಡಿದ್ದರು. ಅದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸಿ ಸೂಕ್ತ ಕಾರ್ಯಕ್ರಮ ರೂಪಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಅಭಿಯಂತರಾದ ರಘು ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಇತರ ಸಿಬ್ಬಂದಿಗಳೊಂದಿಗೆ ತೆರಳಿ ರವಿ ತಮ್ಮಯ್ಯ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಎರಡು ದಿನದಲ್ಲಿ ಅಂದಾಜು ಪಟ್ಟಿ ತಯಾರಿಸಿ ಶಾಸಕರ ಅನುಮೋದನೆ ಪಡೆಯಲಾಗುವುದು ಎಂದು ಇಂಜಿನಿಯರ್ ವಿಭಾಗ ಮಾಹಿತಿ ನೀಡಿದ್ದಾರೆ. ಶಾಸಕರ ತಕ್ಷಣದ ಸ್ಪಂದನೆಗೆ ರವಿ ತಮ್ಮಯ್ಯ ಧನ್ಯವಾದ ಹೇಳಿದರಲ್ಲದೆ, ವಿಭಿನ್ನ ಚಿಂತನೆಯುಳ್ಳ ಶಾಸಕ ಡಾ.ಮಂತರ್ ಗೌಡ ಜನಾನುರಾಗಿ ಶಾಸಕರಾಗಿ ಗುರುತಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಯ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.










