
ನಾಪೋಕ್ಲು ಜೂ.23 NEWS DESK : ಕೊಡಗಿನ ಸಂಸ್ಕೃತಿ, ಕ್ರೀಡೆ ಹಾಗೂ ಇತಿಹಾಸವನ್ನು ಪೋಷಿಸಿ ಬೆಳೆಸಲು ಸದಾ ಸಿದ್ಧ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಮನೆಯ ಮುಖ್ಯಸ್ಥರ ಕೋರಿಕೆ ಮೇರೆಗೆ ಕುಂಡ್ಯೋಳಂಡ ಐನ್ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಆತಿಥ್ಯವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ವಿಭಿನ್ನವಾಗಿದೆ. ಅದರೊಂದಿಗೆ ಹಾಕಿಕ್ರೀಡೆಯು ಮಹತ್ವವನ್ನು ಹೊಂದಿದೆ. ಮುಂದಿನ ಸಾಲಿನಲ್ಲಿ ನಡೆಯುವ ಹಾಕಿ ಉತ್ಸವದ ಯಶಸ್ವಿಗೆ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 2024ರಲ್ಲಿ ಜರುಗಿದ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿಂದೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಕೊಡುಗೆ ಬಹು ದೊಡ್ಡದು. ಕುಂಡ್ಯೋಳಂಡ ಕುಟುಂಬಸ್ಥರ ಕೋರಿಕೆ ಮೇರೆಗೆ ಶಾಸಕರು ಈ ಹಾಕಿ ಪಂದ್ಯಾಟಕ್ಕೆ ವಿಶೇಷ ಅನುದಾನ ಒದಗಿಸುವಲ್ಲಿ ಶ್ರಮಿಸಿದರು. ಶಾಸಕರ ಈ ಪ್ರಯತ್ನಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಕುಂಡ್ಯೋಳಂಡ ಕುಟುಂಬಸ್ಥರು ಈ ವಿಶೇಷ ಔತಣ ಕೂಟವನ್ನು ಆಯೋಜಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಈ ಸಂದರ್ಭ ಕಾಂಚನ್ ಪೊನ್ನಣ್ಣ, ಬೊಟ್ಟಕಾಳಂಡ ಮುತ್ತಣ್ಣ, ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಚುಬ್ಬಣಿ ಸುಬ್ಬಯ್ಯ, ಲಲಿತಾ ಚಿಣ್ಣಪ್ಪ, ರಮೇಶ್ ಮುದ್ದಯ್ಯ, ದಿನೇಶ್ ಕಾರ್ಯಪ್ಪ, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ










