
ಮಡಿಕೇರಿ ಜೂ.23 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ (ಮಕ್ಕಳ ವಿಭಾಗ) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅತಿಸಾರ ಬೇಧಿ ತಡೆಗಟ್ಟುವಿಕೆ ಅಭಿಯಾನಕ್ಕೆ ಚಾಲನೆ ದೊರೆಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಸ್ಟಾಪ್ ಡೈಯೇರಿಯ ಕ್ಯಾಂಪೇನ್ ಅನ್ನು ಜು.31 ರವರೆಗೆ ಆಯೋಜಿಸಲಾಗಿದೆ. ಎಲ್ಲಾ ಐದು ವರ್ಷದ ಒಳಗಿನ ಮಕ್ಕಳಿಗೆ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಒಂದು ಮಗುವಿಗೆ ಎರಡು ಪ್ಯಾಕೆಟ್ ಓಆರ್‍ಎಸ್ ಮತ್ತು ಒಂದು ಪ್ಯಾಕೆಟ್ ಜಿಂಕ್ ಮಾತ್ರೆಯನ್ನು ನೀಡಲಾಗುವುದು ಎಂದರು. ಭೇದಿ ಆದಲ್ಲಿ ಮಾತ್ರ ಜಿಂಕ್ ಮಾತ್ರೆಯನ್ನು 14 ದಿನಗಳವರೆಗೆ ಉಪಯೋಗಿಸುವುದು. ಈ ಬಗ್ಗೆ ಪ್ರತಿಯೊಬ್ಬ ಪೋಷಕರಿಗೂ ಮಾಹಿತಿ ತಿಳಿದಿರಬೇಕು. ಗುಣಮುಖವಾಗದಿದ್ದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಅತಿಸಾರ ಬೇಧಿಯಿಂದ ಉಂಟಾಗುವ ಮರಣವನ್ನು ತಪ್ಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಡಾ.ಸತೀಶ್ ಕುಮಾರ್ ಹೇಳಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾತನಾಡಿ, ಅತಿಸಾರ ಭೇದಿಯಿಂದ ಶೂನ್ಯ ಮರಣ ಎಂಬ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಆರೋಗ್ಯ ದಿನಾಚರಣೆ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಅಂಗನವಾಡಿ ಮತ್ತು ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಎಲ್ಲಾ ಸ್ವಸಹಾಯ ಗುಂಪುಗಳಲ್ಲಿ ಸಭೆ ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ ಎಂದರು. ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ಸ್ವಚ್ಛತೆ ಬಗ್ಗೆ ಮತ್ತು ಕೈ ತೊಳೆಯುವ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಶಿಕ್ಷಣದ ಪೋಸ್ಟರ್ಸ್ ಮತ್ತು ಬ್ಯಾನರ್‍ಗಳನ್ನು ವಿತರಿಸಲಾಗಿದೆ ಹಾಗೂ ಅನಾವರಣಗೊಳಿಸಲಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದೆ ಎಂದು ಹೇಳಿದರು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್ ಮಾತನಾಡಿ ಇದು ಬರಿ ಕಾರ್ಯಕ್ರಮವಲ್ಲ, ಅನುಷ್ಠಾನಕ್ಕೆ ಬರಬೇಕು. ನಿರ್ಜಲೀಕರಣ ಆಗದಂತೆ ದಿವ್ಯ ಔಷಧವಾದ ಒಆರ್‍ಎಸ್ ಮತ್ತು ಜಿಂಕ್ ಮಕ್ಕಳಿಗೆ ಕೊಡಿಸಿ ಎಂದು ಸಲಹೆ ನೀಡಿದರು. ಡಾ.ದಿವ್ಯರಾಣಿ ಮತ್ತು ಡಾ.ಸಲ್ಮಾ ಅತಿಸಾರ ಬೇದಿ ಆದಾಗ ತಕ್ಷಣವೇ ತಯಾರಿಸುವ ಮನೆಮಟ್ಟದ ಒಆರ್‍ಎಸ್ (6 ಟೀ ಸ್ಪೂನ್ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಗೂ ಒಂದು ಲೀಟರ್ ಶುದ್ಧ ಕುಡಿಯುವ ನೀರು) ಈ ಬಗ್ಗೆ ಮಾಹಿತಿ ನೀಡಿದರು. ‘ಯಾವುದೇ ಕಾರಣಕ್ಕೂ ಹುಳಿ ಅಂಶ ಮಿಶ್ರಣ ಮಾಡುವಂತಿಲ್ಲ, ಹಣ್ಣಿನ ಜ್ಯೂಸ್‍ಗೆ ಕೂಡ ಸಕ್ಕರೆ ಮಿಶ್ರಣ ಮಾಡಬಾರದು ಎಂದು ಕರೆ ನೀಡಿದರು.’ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಕೈ ತೊಳೆಯುವ ವಿಧಾನದ ಬಗ್ಗೆ ಓಆರ್‍ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ನಿರೂಪಿಸಿ, ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ ಮತ್ತು ಪುಟಾಣಿ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.









