
ಮಡಿಕೇರಿ ಜೂ.24 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಣ್ಯ ಇಲಾಖೆ ಸೋಮವಾರಪೇಟೆ ವಲಯದ ಜಂಟಿ ಆಶ್ರಯದಲ್ಲಿ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಶಾಲೆಯ ಅವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯಇಲಾಖೆಯ ಅರಣ್ಯ ಪಾಲಕರಾದ ಚಂದ್ರಶೇಖರ್, ಎಲ್ಲರೂ ಪರಿಸರವನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು. ಒಂದು ದಿನದ ಕಾರ್ಯಕ್ರಮವಾಗಿ ಆಚರಿಸದೆ ಪ್ರತಿನಿತ್ಯ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣಗೆ ಪಣತೊಡಬೇಕು ಎಂದು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯ ಶಿಕ್ಷಕರಾದ ಸರಳಕುಮಾರಿ, ಕೃಷಿ ಮೇಲ್ವಿಚಾರಕರಾದ ಹರೀಶ್ ಕುಮಾರ್ ಹಾಜರಿದ್ದರು. ಕೃಷಿ ಮೇಲ್ವಿಚಾರಕರಾದ ಹರೀಶ್ ನಿರೂಪಿಸಿದರು, ಸೇವಾಪ್ರತಿನಿಧಿ ಚೆನ್ನಮ್ಮ ರಾಜು ಸ್ವಾಗತಿಸಿದರು. ಶಿಕ್ಷಕಿ ಅನೂಸೂಯ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಔಷಧೀಯ ಸಸ್ಯಗಳ ಸುವಾಸನೆಯನ್ನು ಗುರುತಿಸುವ ಸ್ಪರ್ಧೆ, ಭೂಮಿಗೆ ಬಿದ್ದ ಬೀಜವೂ ಮೊಳಕೆ ಒಡೆದು ಸಸಿಯಾಗಿ ಹೂವಾಗಿ ಕಾಯಾಗಿ ಹಣ್ಣಾಗುವ ಚಿತ್ರವನ್ನು ಬಿಡಿಸುವ ಸ್ಪರ್ಧೆ, ಪರಿಸದ ಚಿತ್ರ, ಭಾಷಣ ಸ್ಪರ್ಧೆ ನಡೆಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಮಕ್ಕಳು ಮತ್ತು ಗಣ್ಯರಿಂದ ಅರಣ್ಯ ಗಿಡಗಳನ್ನು ಶಾಲಾ ಆವರಣದಲ್ಲಿ ನಾಟಿ ಮಾಡಲಾಯಿತು.









