
ಮಡಿಕೇರಿ ಜೂ.27 NEWS DESK : ಜಿಲ್ಲಾ ಕೇಂದ್ರ ಮಡಿಕೇರಿಯ ಅಂಚಿನ ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ’ ಮತ್ತು ‘3ಡಿ ಕಿರು ತಾರಾಲಯ’ಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಆನಂದ್ ಪ್ರಕಾಶ್ ಮೀನಾ ಇತರರು ಇದ್ದರು. ಕರ್ಣಂಗೇರಿಯ ಸುಮಾರು 7.10 ಏಕರೆ ಪ್ರದೇಶದಲ್ಲಿ 12.26 ಕೋಟಿ ರೂ. ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣವಾಗಲಿದ್ದು, ಕಾಮಗಾರಿ ಪೂರ್ಣಕ್ಕೆ 18 ತಿಂಗಳ ಕಾಲಾವಧಿಯನ್ನು ನಿಗದಿ ಪಡಿಸಲಾಗಿದೆ. ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಎಸ್.ಕೆ. ಕನ್ಸ್ಟ್ರಕ್ಷನ್ ನಿರ್ವಹಿಸಲಿದೆ. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ 7.02 ಕೋಟಿ ವೆಚ್ಚದಲ್ಲಿ ಮತ್ತು 3ಡಿ ಕಿರುತಾರಾಲಯ 5.24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಉಪ ಪ್ರಾದೇಶಿಕ ಕೇಂದ್ರದ ನೆಲ ಮಹಡಿಯಲ್ಲಿ ಫನ್ ಸೈನ್ಸ್ ಗ್ಯಾಲರಿ, ಆಡಿಟೋರಿಯಂ ಮತ್ತು ಮೀಟಿಂಗ್ ಹಾಲ್ ಬರಲಿದ್ದು, ಮೇಲ್ಮಹಡಿಯಲ್ಲಿ ತಿಮೇಟಿಕ್ ಗ್ಯಾಲರಿ ಬರಲಿದೆ. 3ಡಿ ಕಿರು ತಾರಾಲಯದಲ್ಲಿ ಇಮ್ಮಸ್ರ್ಯು 3ಡಿ-4ಕೆ ಡಿಜಿಟಲ್ ಪ್ರಾಜೆಕ್ಷನ್ ಸಿಸ್ಟಂ, ಆಸ್ಟ್ರೋ ಕೆಫೆ ಮತ್ತು ಅಬ್ಸರ್ವೇಟರಿ ಶೆಲ್ ಬರಲಿದೆ.









