
ನಾಪೋಕ್ಲು ಜೂ.27 NEWS DESK : ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ನಾಪೋಕ್ಲು ವಿಭಾಗದಲ್ಲಿ ಆರಿದ್ರ ಮಳೆ ಬಿರುಸುಕೊಂಡಿದ್ದು, ವಿವಿಧೆಡೆ ರಸ್ತೆಗಳು. ಜಲಾವೃತವಾಗಿವೆ. ನಾಪೋಕ್ಲು -ಮೂರ್ನಾಡು ಸಂಪರ್ಕ ರಸ್ತೆಗೆ ಪ್ರವಾಹ ಬಂದಿದ್ದು, ಬುಧವಾರ ಸಂಜೆಯಿಂದಲೇ. ಮೂರ್ನಾಡು ರಸ್ತೆಯ ಬೊಳಿಬಾಣೆ ರಸ್ತೆಗೆ ಆವರಿಸಿದ ಕಾವೇರಿ ನದಿ ಪ್ರವಾಹದಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಾಪೋಕ್ಲು – ಕೈಕಾಡು -ಪಾರಾಣೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೂ ಪ್ರವಾಹ ಉಂಟಾಗಿದೆ.ಕೈಕಾಡು ರಸ್ತೆಯಲ್ಲಿರುವ ಎತ್ತು ಕಡವು ಹೊಳೆ ರಸ್ತೆಯಲ್ಲಿ ಮೈದುಂಬಿ ಹರಿದು ಸಂಚಾರ ಸ್ಥಗಿತ ಗೊಂಡಿದೆ. ನಾಪೋಕ್ಲು ಬೇತು ಗ್ರಾಮದ ಮೂಲಕ ಬಲಮುರಿ ಗ್ರಾಮಕ್ಕೆ ಸಂಪರ್ಕಿಸುವ ಮಕ್ಕಿ ಕಡವು ಎಂಬಲ್ಲಿ ರಸ್ತೆ ಹಾಗೂ ಸೇತುವೆ ಪ್ರವಾಹ ಆವರಿಸಿ ಸಂಚಾರ ದುಸ್ತರವಾಗಿದೆ. ಚರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯ ಚರಿಯಪಂಬುವಿನಲ್ಲಿ ರಸ್ತೆಯ ಮೇಲೆ ಪ್ರವಾಹದ ನಿರು ಹರಿಯುತ್ತಿದ್ದು, ಸಂಪರ್ಕ ಕಳೆದೆರಡು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯಕ್ಕೆ ನಾಪೋಕ್ಲು -ಬೆಟ್ಟಗೇರಿ ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು ಮಳೆ ಮುಂದುವರೆದರೆ ಕೊಟ್ಟಮುಡಿ ರಸ್ತೆಯಲ್ಲಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಮೀಪದ ಬಲಮುರಿಯ ಪ್ರಸಿದ್ಧ ಅಗಸ್ಟೇಶ್ವರ ದೇವಾಲಯದ ತಡೆಗೋಡೆಯವರಿಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ. ಇಲ್ಲಿನ ಅಂಚೆ ಕಚೇರಿಯ ಕಟ್ಟಡದ ಮೆಟ್ಟಿಲು ವರೆಗೆ ನೀರು ನಿಂತಿದ್ದು ಪಕ್ಕದ ರಸ್ತೆ ಜಲಾವೃತಗೊಂಡಿದೆ. ಇಲ್ಲಿನ ಕೆಳಗಿನ ಹಳೆಯ ಸೇತುವೆ ಪ್ರವಾಹದಲ್ಲಿ ಮುಳುಗಡೆ ಕೊಂಡಿದೆ. ಇದೀಗ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊಳೆಯ ದಂಡೆಯ ಸಮೀಪ ವಾಸಿಸುತ್ತಿರುವವರಿಗೆ ಇದೀಗ ಆತಂಕ ಎದುರಾಗಿದೆ. ದೇವಾಲಯದ ಮುಂಭಾಗದ ಅಶ್ವತಕಟ್ಟೆವರೆಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ. ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪೆÇ್ಪೀಟ್ ಸೇತುವೆ ಮೇಲೆ ಪ್ರವಾಹ ಹರಿಯುತ್ತಿದ್ದು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು ಗುರುವಾರ ಸಂಜೆ ಹೊತ್ತಿಗೆ ಸಂಪರ್ಕ ಪುನರಾರಂಭಗೊಂಡಿದೆ. ಬಲಮುರಿ ಗ್ರಾಮದಲ್ಲಿ ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ಮರ ಬಿದ್ದ ಪರಿಣಾಮ ನಾಪೋಕ್ಲು ವಿಗೆ ಸರಬರಾಜಾಗುವ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕಕಲ್ಪಿಸಿದರು. ಎಮ್ಮೆ ಮಾಡು ಗ್ರಾಮದ ಗದ್ದೆಗಳು ಜಲಾವೃತಗೊಂಡು ಸಂಪೂರ್ಣ ಮುಳುಗಡೆಯಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಬುಧವಾರ ಸುರಿದ ಆರಿದ್ರ ಮಳೆಯ ಆರ್ಭಟಕ್ಕೆ ಕಕ್ಕಬ್ಬೆಯಲ್ಲಿ ರಾತ್ರಿ ಅವಾಂತರ ಸೃಷ್ಟಿಯಾಗಿದೆ. ಕಕ್ಕಬ್ಬೆ ಹೊಳೆಯು ಮೈದುಂಬಿ ಹರಿದು ಕಕ್ಕಬ್ಬೆಯಿಂದ ತೆರಳುವ ಎಲ್ಲಾ ರಸ್ತೆಗಳು ಜಲಾವೃತ ಗೊಂಡಿತ್ತು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆ ,ಕಕ್ಕಬ್ಬೆಯಿಂದ ಕುಂಜಿಲ ಪೈನರಿ ದರ್ಗಾಕ್ಕೆ ತೆರಳುವ ರಸ್ತೆ. ನಾಪೋಕ್ಲು -ವಿರಾಜಪೇಟೆಗೆ ತೆರಳುವ ಮುಖ್ಯರಸ್ತೆ ಪ್ರವಾಹದಿಂದ ಆವರಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ಗುರುವಾರ ಬೆಳಿಗ್ಗೆ ತೆರವಾಗಿದೆ. ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ರವರ ವಾಸದ ಮನೆಯ ಒಂದು ಭಾಗದ ಗೋಡೆ ಭಾರಿ ಗಾಳಿ ಮಳೆಯಿಂದಾಗಿ ಬುಧವಾರ ರಾತ್ರಿ ಪೂರ್ಣವಾಗಿ ಹಾನಿಯಾಗಿದೆ. ಕಿರುಂದಾಡು ಗ್ರಾಮದ ಮುಕ್ಕಟಿರ ಐನ್ ಮನೆ ಪೂರ್ಣ ಹಾನಿಯಾಗಿ ದ್ದು ಸ್ಥಳಕ್ಕೆ ಕಂದಾಯ ಪರಿಕ್ಷಕರಾದ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು..ಎಮ್ಮೆಮಾಡು ಗ್ರಾಮದ ಕದಿಸಮ್ಮ ರವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಅಪಾಯ ಎದುರಾಗಿದೆ. ಯವಕಪಾಡಿ ಗ್ರಾಮದ ಕಾಪಾಳ ಕಾಲೊನಿಯ ಮಿಲನ್ ಎಂಬವರ ಮನೆಯ ಹಿಂದಿನ ಬರೆಕುಸಿದು ಮನೆಯೊಳಗೆ ನೀರುನುಗ್ಗಿ ಅಪಾರ ನಷ್ಟ ಉಂಟಾಗಿದೆ.
ವರದಿ : ದುಗ್ಗಳ ಸದಾನಂದ.









