
ಮಡಿಕೇರಿ ಜೂ.27 NEWS DESK : ಮಡಿಕೇರಿಯ ಸುದರ್ಶನ ವೃತ್ತದ ಬಳಿ ಇರುವ ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡುವಂತೆ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು, ಜಿಲ್ಲೆಯ ಎಲ್ಲಾ ದಲಿತ ಸಮುದಾಯದ ಪ್ರಗತಿಗೆ ಉಪಯೋಗ ಆಗಬೇಕಾದ ಅಂಬೇಡ್ಕರ್ ಭವನವನ್ನು ಒಬ್ಬ ವ್ಯಕ್ತಿ ಕೆಲವು ಸದಸ್ಯರನ್ನು ಇಟ್ಟುಕೊಂಡು ತನಗೆ ಇಷ್ಟ ಬಂದಂತೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಕೊಡಗಿನ ಎಲ್ಲಾ ದಲಿತ ಸಂಘರ್ಷ ಸಮಿತಿಯ ಮುಖಂಡರು ಒಟ್ಟು ಸೇರಿ ಸಭೆ ನಡೆಸಿ ಅಂಬೇಡ್ಕರ್ ಭವನದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯನ್ನು ಹುಟ್ಟು ಹಾಕಿ ಕೊಡಗಿನ ದಲಿತ ಸಮುದಾಯದ ಉಪಯೋಗಕ್ಕಾಗಿ ಹೋರಾಟ ಆರಂಭಿಸಿದ್ದು, ಇದೀಗ ತನಿಖಾ ಹಂತದಲ್ಲಿದೆ. ಆದರೆ 22 ವರ್ಷಗಳ ಆಡಿಟ್ ಮತ್ತಿತರ ಸುಳ್ಳು ದಾಖಲೆಗಳನ್ನು ಹಾಜರು ಪಡಿಸಿ ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಗಳು ನಡೆಯುತ್ತಿದ್ದು, ದಲಿತ ಸಮುದಾಯದ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ದೂರಿದರು. ಜಿಲ್ಲಾಡಳಿತ ತಕ್ಷವೇ ಅಂಬೇಡ್ಕರ್ ಭವನವನ್ನು ಸ್ವಾಧಿನ ಪಡಿಸಿಕೊಂಡು ಯಾವುದೇ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಮದ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಈ ಜಾಗವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ದಲಿತ ಸಂಘಟನೆ ಹಾಗೂ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಉಸ್ತುವಾರಿ ಸಚಿವರ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮತ್ತು ತಮಟೆ ಚಳುವಳಿಯ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸಮಿತಿಯ ಅಧ್ಯಕ್ಷ ಹೆಚ್.ಎಲ್.ದಿವಾಕರ್, ಪ್ರಧಾನ ಕಾರ್ಯದರ್ಶಿ ಟಿ.ಎನ್.ಗೋವಿಂದಪ್ಪ, ಉಪಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಪ್ರಮುಖರಾದ ಗಾಯತ್ರಿ ನರಸಿಂಹ, ರಾಜ, ಪಿ.ಮುತ್ತ ಮತ್ತಿತರರು ಇದ್ದರು.









