
ಮಡಿಕೇರಿ ಜೂ.27 NEWS DESK : ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಕೆಲವು ಸಾಲುಗಳನ್ನು ಕತ್ತರಿಸಿ ಕೊಡಗು ಜಿಲ್ಲಾ ಕೆಡಿಪಿ ಸಭೆಯಲ್ಲಿ ಧ್ವನಿ ಮುದ್ರಣವನ್ನು ಬಿತ್ತರಿಸಿದ ಕಾರಣಕ್ಕಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ಕೊಡಗು ಜಿ.ಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಯ ಆರಂಭದಲ್ಲಿ ನಾಡಗೀತೆಯನ್ನು ಹಾಕಲಾಯಿತು. ಧ್ವನಿ ಮುದ್ರಣದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ….’ ಸಾಲುಗಳು ಇಲ್ಲದೆ ಇರುವುದನ್ನು ಗಮನಿಸಿದ ಎಸ್.ಎಲ್.ಭೋಜೇಗೌಡ ಅವರು ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಈ ರೀತಿ ನಾಡಗೀತೆಯನ್ನು ಧ್ವನಿ ಮುದ್ರಣದ ಮೂಲಕ ಹಾಕುವ ಮತ್ತು ಕೆಲವು ಸಾಲುಗಳನ್ನು ಕತ್ತರಿಸುವ ಅಗತ್ಯವೇನಿತ್ತು. ಧ್ವನಿ ಮುದ್ರಣದ ಬದಲು ಶಾಲಾ ಮಕ್ಕಳಿಂದ ಹಾಡಿಸಬಹುದಿತ್ತಲ್ಲ, ನಾಡಗೀತೆಗೆ ತನ್ನದೇ ಆದ ಗೌರವವಿದೆ, ಸಂಪೂರ್ಣ ನಾಡಗೀತೆಯನ್ನು ಪ್ರಸಾರ ಮಾಡಬೇಕಾಗಿತ್ತು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.









