
ಮಡಿಕೇರಿ ಜೂ.28 NEWS DESK : ಕಳೆದ ನಾಲ್ಕು ದಿನಗಳ ಗಾಳಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಭೇಟಿ ನೀಡಿದರು. ಪ್ರವಾಹದಿಂದ ಪದೇ ಪದೇ ಸಂಕಷ್ಟಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೆಚ್ಚಿನ ಮಳೆಯಾಗುವ ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ಭಾಗದಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಪ್ರದೇಶಕ್ಕೆ ಸಚಿವರು, ಶಾ¸ಕ ಡಾ.ಮಂತರ್ ಗೌಡ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ವರ್ಷ ಮುಂಗಾರಿನ ಅವಧಿಯಲ್ಲಿ ಉಕ್ಕಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಹಾಗೂ ಸುತ್ತಮುತ್ತಲಿನ ಪರಿಸರದ ವೀಕ್ಷಿಸಿದ ಸಚಿವರು ಮತ್ತು ಶಾಸಕರು, ಅಧಿಕಾರಿಗಳಿಗೆ ಸುರಕ್ಷತೆಯ ಬಗ್ಗೆ ಸಲಹೆ ನೀಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಲ್ದಾರೆ ಪಂಚಾಯ್ತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಗಿರಿಜನ ಕಾಲೋನಿಯಲ್ಲಿ ಮಳೆಯಿಂದ ಹಾನಿಯಾದ ಅನಿಲ್ ಕುಮಾರ್ ಎಂಬವರ ಮನೆಗೆ ಸಚಿವರು ಹಾಗೂ ಶಾಸಕರು ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಪರಿಹಾರ ಬಿಡುಗಡೆಗೆ ಸೂಚಿಸಿದರು. ಮಾಲ್ದಾರೆಯಲ್ಲಿ ಸತತ ಗಾಳಿ ಮಳೆಯಿಂದ ಮರ ಬಿದ್ದು ಹಾನಿಯಾಗಿರುವ ಮನೆಯನ್ನು ಸಚಿವರು ವೀಕ್ಷಿಸಿದರು. ಸಚಿವರ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಯ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ರಾ.ಪಂ. ಅಧ್ಯಕ್ಷರಾದ ಮಾಲತಿ ಇತರರು ಹಾಜರಿದ್ದರು. *ದುರಸ್ತಿ ಕಾರ್ಯ* ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ – ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಬರೆ ಕುಸಿದು ವಿದ್ಯುತ್ ಕಂಬ ಮುರಿದು ಹೋಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.ಪ್ರಸ್ತುತ ಹೊಸ ವಿದ್ಯುತ್ ಕಂಬ ಅಳವಡಿಸಲಾಗಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಹಾಗೂ ವಾಹನಗಳ ಸಂಚಾರಕ್ಕೆ ರಸ್ತೆ ತೆರವುಗೊಳಿಸಲಾಗಿದೆ. ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಎಂಬವರ ಗುಡಿಸಲನ್ನು ಕಾವೇರಿ ಪ್ರವಾಹದ ನೀರು ಆವರಿಸಿದ ಹಿನ್ನೆಲೆ, ಸದರಿ ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದರು.ಈ ಸಂತ್ರಸ್ತ ಕುಟುಂಬಕ್ಕೆ ತಹಸೀಲ್ದಾರ್‍ರವರು ಆಹಾರದ ಕಿಟ್ ವಿತರಿಸಿದರು. ನಲ್ಲೂರು ಗ್ರಾಮದ ಚನ್ನರಾಜಪ್ಪ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.










