
ನಾಪೋಕ್ಲು ಜೂ.2 NEWS DESK : ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ದಾಂಧಲೆ ಮಾಡಿ ಬಾರಿ ನಷ್ಟ ಉಂಟು ಮಾಡಿದೆ. ಗ್ರಾಮದ ಅಚ್ಚಂಡಿರ, ಪುಳ್ಳೆರ, ಮಲೆಯರ, ತಂಬಂಡ, ಬಿದ್ದಾಟಂಡ, ಅಚ್ಚಪಂಡ ತೋಟಗಳಲ್ಲಿ ದಾಂಧಲೆ ನಡೆಸಿದ್ದು, ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿ ರೈತರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಮರಿಯಾನೆ ಸೇರಿದಂತೆ ಏಳು ಕಾಡಾನೆಗಳು ಅಡ್ಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆಳಿಗ್ಗೆ ಎಂಟು ಆನೆಗಳು ಬೊಳ್ಳನಮಂಡ ಪೊನ್ನಪ್ಪ ಅವರ ತೋಟದಲ್ಲಿ ಪ್ರತ್ಯಕ್ಷವಾಗಿದೆ. ಅರಣ್ಯ ಸಂರಕ್ಷಣಾಧಿಕಾರಿ ಕಾಳೇಗೌಡ, ಅರಣ್ಯ ರಕ್ಷಕ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದ್ದರೂ ಸಫಲರಾಗಿಲ್ಲ. ಈ ಸಂದರ್ಭ ಗ್ರಾಮಸ್ಥರಾದ ಪುಳ್ಳೆರ ವಿನು, ಸೋಮಯ್ಯ, ಅಚ್ಚಂಡಿರ ಅಪ್ಪಸ್ವಾಮಿ, ಗಣೇಶ, ತಂಬಂಡ ಮುತ್ತಪ್ಪ, ರವಿ, ಮಲೆಯರ ಅಪ್ಪಚ್ಚು, ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









