
ಮಡಿಕೇರಿ ಜು.2 NEWS DESK : ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡ್‍ನ ಸರ್ವೇ ನಂಬರ್ 177/1 ರಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಜಾಗವನ್ನು ಮಂಜೂರು ಮಾಡಲು ತಾಲ್ಲೂಕು ಆಡಳಿತ ಉದ್ದೇಶಿಸಿದ್ದು, ಇದನ್ನು ವಿರೋಧಿಸಿ ನೆಲ್ಲಿಹುದಿಕೇರಿ ಮುಸ್ಲಿಂ ಜಮಾಅತ್ ಸಮಿತಿ ವತಿಯಿಂದ ಜು.4 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಒ.ಎಂ.ಅಬ್ದುಲ್ಲ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ಸಾರ್ವಜನಿಕ ಸ್ಮಶಾನಕ್ಕಾಗಿ ಗುರುತಿಸಿರುವ ಜಾಗವು 60 ಪ್ರವಾಹ ಪೀಡಿತ ಕುಟುಂಬಗಳು ವಾಸಿಸುತ್ತಿರುವ ಜನವಸತಿ ಪ್ರದೇಶದ ಸಮೀಪದಲ್ಲಿದೆ. ಇಲ್ಲಿ ಸ್ಮಶಾನ ನಿರ್ಮಾಣವಾದರೆ ಆರೋಗ್ಯ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಗಳು ಎದುರಾಗಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಆಡಳಿತ ವ್ಯವಸ್ಥೆ ಸ್ಮಶಾನಕ್ಕೆ ಪರ್ಯಾಯ ಜಾಗವನ್ನು ಗುರುತಿಸಲಿ ಎಂದು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸ್ಮಶಾನದ ಜಾಗವನ್ನು ಗುರುತಿಸುವ ಸಂದರ್ಭ ವೈಜ್ಞಾನಿಕ ಚಿಂತನೆ ಮಾಡಬೇಕು, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಆದರೆ ಇದು ಯಾವುದನ್ನೂ ಮಾಡದೆ ಏಕಾಏಕಿ ಜನವಸತಿ ಪ್ರದೇಶದ ಸಮೀಪದಲ್ಲೇ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದುರ್ಬಲ ಸ್ಥಿತಿಯಲ್ಲಿರುವ ಪ್ರವಾಹ ಪೀಡಿತ ಕುಟುಂಬಗಳು ಚಿಂತೆಗೀಡಾಗಿವೆ ಎಂದು ಒ.ಎಂ.ಅಬ್ದುಲ್ಲ ಗಮನ ಸೆಳೆದಿದ್ದಾರೆ.
ಸ್ಥಳೀಯ ನಿವಾಸಿಗಳ ಆಕ್ಷೇಪಣೆಯನ್ನು ಅಧಿಕಾರಿ ವರ್ಗ ಗಂಭೀರವಾಗಿ ಪರಿಗಣಿಸಬೇಕು, ಜನರ ಭಾವನೆಗಳಿಗೆ ಗೌರವ ನೀಡಬೇಕು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಸ್ಮಶಾನದ ಜಾಗ ಗುರುತಿಸುವ ಸಂದರ್ಭ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಒ.ಎಂ.ಅಬ್ದುಲ್ಲ ಒತ್ತಾಯಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಯಲಿದ್ದು, ಜಮಾಅತ್ ಸಮಿತಿಯ ಪ್ರಮುಖರು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.









