

ಕುಶಾಲನಗರ ಜು.5 NEWS DESK : ತಾಲ್ಲೂಕು ಕೇಂದ್ರವಾದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ
ದಾನಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು – ಈ ಬ್ಯಾಂಕ್ ನ ಹಿರಿಯ ನಿವೃತ್ತ ಅಧಿಕಾರಿ, ಕುಶಾಲನಗರದ
ಸೂದನ ರತ್ನಾವತಿ ಪೂಣಚ್ಚ ಉಚಿತ ಬರೆಯುವ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಸೂದನ ರತ್ನಾವತಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೃಢ ಸಂಕಲ್ಪ ತೊಟ್ಟು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಿಕೊಂಡು ಶಿಕ್ಷಣ ನೀಡಿದ ಗುರುಗಳು ಹಾಗೂ ಜನ್ಮ ನೀಡಿದ ತಂದೆ- ತಾಯಿಗಳಿಗೆ ಗೌರವ ನೀಡಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಮಾತನಾಡಿ , ಶಿಕ್ಷಣ ಪ್ರೇಮಿ ಸೂದನ ರತ್ನಾವತಿ ಅವರು ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ವಿತರಿಸುತ್ತಿದ್ದು, ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ತಮ್ಮಲ್ಲಿರುವ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಅವರ ಸೇವಾ ಕಾರ್ಯವು ಶ್ಲಾಘನೀಯವಾದುದು ಎಂದರು. ಶಾಲಾ ಶಿಕ್ಷಕರಾದ ಕೆ.ಟಿ.ರಶ್ಮಿ,ಎಸ್.ಎಸ್.ವೇಣುಗೋಪಾಲ್, ಎಂ.ತುಳಸಿ, ಎ.ಜೆ.ಚಂದ್ರಾವತಿ, ಅನಿತಾ, ಅಕ್ಷತಾ ಹಾಗೂ ಕಛೇರಿ ಸಿಬ್ಬಂದಿ ಕೆ.ಬಿ.ಲಕ್ಷ್ಮಿ ಇದ್ದರು. ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 8,9 ಮತ್ತು 10ನೇ ತರಗತಿಯಲ್ಲಿ ಮಾಡುತ್ತಿರುವ 100 ವಿದ್ಯಾರ್ಥಿಗಳಿಗೆ ಸೂದನ ರತ್ನಾವತಿ ಅವರು ರೂ.40 ಸಾವಿರ ಮೊತ್ತದ ನೋಟ್ ಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.








