

ಮಡಿಕೇರಿ ಜೂ.4 NEWS DESK : ಸಂತೋಷ ಅನ್ನೋದು ಒಂದು ಮನಸ್ಥಿತಿ. ಶ್ರದ್ಧೆ ಮತ್ತು ನಿರಂತರ ಶ್ರಮದಿಂದ ಸಾಧನೆಗೈಯಲು ಸಾಧ್ಯ, ಸತತ ಪ್ರಯತ್ನ ನಮಗೆ ನೀಡುವ ಆನಂದವೇ ನಿಜವಾದ ಸಂತೋಷ ಎಂದು ಸಂತ ಜೋಸೆಫರ ಕಾನ್ವೆಂಟ್ ಸುಪೀರಿಯರ್ ರೆ.ಸಿಸ್ಟರ್ ಮರ್ಸಿ ಜೇಕಬ್ ಅಭಿಪ್ರಾಯಪಟ್ಟರು. ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಆಯೋಜನೆಗೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಖ್ಯಾತ ಉದ್ಯಮಿ ರತನ್ ಟಾಟಾ ಅವರ ಸಾಧನೆಯ ಬಗ್ಗೆ ಮಕ್ಕಳಿಗೆ ಹೇಳುತ್ತಾ, ಸಾಧನೆಗೆ ಶ್ರಮವನ್ನು ಹೊರತುಪಡಿಸಿ ಪರ್ಯಾಯ ವ್ಯವಸ್ಥೆ ಇಲ್ಲ ಎಂಬ ಕಿವಿಮಾತನ್ನು ಹೇಳಿದರು. ಏಕಾಗ್ರತೆಯಿಂದ ಓದಿ ಸಾಧಿಸುವ ಮನೋಬಲ ಎಲ್ಲ ವಿದ್ಯಾರ್ಥಿಗಳಿಗೂ ಬರಲಿ ಎಂದು ಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಲೂರ್ದ್ ಮೇರಿ ವಿದ್ಯಾರ್ಥಿ ವೃಂದಕ್ಕೆ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯ ಸಿಸ್ಟರ್ ರೋಜಾ, ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭವನ್ನು ಕೋರಿದರು. ಈ ಶೈಕ್ಷಣಿಕ ವರ್ಷದಲ್ಲಿ ಇನ್ನಷ್ಟು ಸಾಧನೆಗೈಯುವ ಶಕ್ತಿ ಮಕ್ಕಳಿಗೆ ಬರಲಿ, ಈ ನಿಟ್ಟಿನಲ್ಲಿ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದರು. ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ, ಕಿಂಡರ್ ಗಾರ್ಟನ್ ವಿಭಾಗದ ಮುಖ್ಯಸ್ಥರಾದ ಸಿಸ್ಟರ್ ಅಂತೋಣಿಯಮ್ಮ ಹಾಜರಿದ್ದರು. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅಲ್ಫಿಯಾಳನ್ನು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು. ನೂತನ ವಿದ್ಯಾರ್ಥಿ ವೃಂದದ ನಾಯಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನೆರವೇರಿತು.








